ಶಿರಸಿ: ಶಿರಸಿಯ ಜೆಎಮ್‌ಎಫ್‌ಸಿ ನ್ಯಾಯಾಲಯವು ‘ಕಂಟೆಂಪ್ಟ್ ಆಫ್ ಕೋರ್ಟ್’ ಪ್ರಕರಣದ ಅಡಿ ನ್ಯಾಯಾಲಯದ ಇಂಜಂಕ್ಷನ್ ಆದೇಶವನ್ನು ಉಲ್ಲಂಘಿಸಿ ರೈತರ ಮೇಲೆ ದರ್ಪ ತೋರಿದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ತಾಲೂಕಿನ ಕುಪ್ಪಗಡ್ಡೆ ಗ್ರಾಮದ ರೈತರ ಜಮೀನು ತಗಾದೆಗೆ ಸಂಬಂಧಿಸಿ ನ್ಯಾಯಾಲಯದ ಆದೇಶ ಮೀರಿ ಬೇಲಿ ತೆರವು ಕಾರ್ಯ ಮಾಡಿದ ಬನವಾಸಿ ಉಪ-ತಹಸೀಲ್ದಾರ್ ಚಿದಾನಂದ ಗೊಣಸಗಿ, ಬನವಾಸಿ ಕಂದಾಯ ನಿರೀಕ್ಷಕಿ ಶ್ರೀಮತಿ ಮಂಜುಳಾ ನಾಯ್ಕ, ಭೂಮಾಪಕ ಕುಮಾರ್ ಎನ್., ಬದನಗೋಡ ಗ್ರಾಮ ಪಂಚಾಯತದ ಗ್ರಾಮ ಆಡಳಿತಾಧಿಕಾರಿ ಶ್ರೀಮತಿ ಅಪೂರ್ವಾ ಪಿ. ಹಾಗೂ ಇವರ ಸಹಾಯಕರಾದ ಮಂಜುನಾಥ್ ಮತ್ತು ಸರ್ಫರಾಜ್ ಖಾನ್‌ಗೆ ನ್ಯಾಯಾಲಯ ನೋಟಿಸ್ ನೀಡಿದೆ.
ಕುಪ್ಪಗಡ್ಡೆ ಗ್ರಾಮದ ರಾಜಶೇಖರ ಗೌಡ ಹಾಗೂ ಇತರರು ಅದೇ ಗ್ರಾಮದ ಬಸವರಾಜ ವಡ್ಡಿಕೊಪ್ಪ ಮತ್ತವರ ಸಹೋದರರು ನೀಡುತ್ತಿದ್ದ ಕಿರುಕುಳದ ವಿರುದ್ಧ ದಾವೆ (ದಾವೆ ಸಂಖ್ಯೆ 251/24) ಸಲ್ಲಿಸಿ ನ್ಯಾಯಾಲಯದಿಂದ ಇಂಜಂಕ್ಷನ್ ಆದೇಶವನ್ನು ಪಡೆದಿದ್ದರು. ಇದರಿಂದ ಮುಜುಗರಕ್ಕೊಳಗಾದ ಪ್ರತಿವಾದಿಗಳಾದ ಬಸವರಾಜ ವಡ್ಡಿಕೊಪ್ಪ ಮತ್ತು ಸಹೋದರರು, ಕೆಲವು ಕಂದಾಯ ಅಧಿಕಾರಿಗಳ ಸಹಾಯದಿಂದ ನ್ಯಾಯಾಲಯದ ಆದೇಶಕ್ಕೆ ಹಾಗೂ ವಾದಿಯ ಜಮೀನಿಗೆ ಅಕ್ರಮವಾಗಿ ಧಕ್ಕೆ ತರುವ ಹುನ್ನಾರ ನಡೆಸುತ್ತಿದ್ದನ್ನು ಅರಿತು ವಾದಿಗಳು ತಮ್ಮ ವಕೀಲರ ಮುಖಾಂತರ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ್ದರು. ಈ ನೋಟಿಸ್ ಅನ್ನು ಧಿಕ್ಕರಿಸಿದ ಬನವಾಸಿ ಉಪ-ತಹಸೀಲ್ದಾರ್ ಚಿದಾನಂದ ಗೊಣಸಗಿ, ಬನವಾಸಿ ಕಂದಾಯ ನಿರೀಕ್ಷಕಿ ಶ್ರೀಮತಿ ಮಂಜುಳಾ ನಾಯ್ಕ, ಭೂಮಾಪಕ ಕುಮಾರ್ ಎನ್., ಬದನಗೋಡ ಗ್ರಾಮ ಪಂಚಾಯತದ ಗ್ರಾಮ ಆಡಳಿತಾಧಿಕಾರಿ ಶ್ರೀಮತಿ ಅಪೂರ್ವಾ ಪಿ. ಹಾಗೂ ಇವರಗಳ ಸಹಾಯಕರಾದ ಮಂಜುನಾಥ್ ಮತ್ತು ಸರ್ಫರಾಜ್ ಖಾನ್ ಇವರೆಲ್ಲರೂ ಸೇರಿ ದಾವಾಸ್ತಿ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಸರ್ವೆ ನಂಬರ್ 48 ಹಾಗೂ 62ರ ಗಡಿಭಾಗದಲ್ಲಿ 2 ಹೊಸದಾಗಿ ದಾರಿ ಮಾಡುವ ಪ್ರಯತ್ನ ಮಾಡಿ ಜಮೀನಿನ ರಕ್ಷಣಾ ಬೇಲಿಯನ್ನು ಕೀಳುವ ಹುನ್ನಾರ ನಡೆಸಿದ್ದರು. ಈ ವೇಳೆಯಲ್ಲಿ ನ್ಯಾಯಾಲಯದಿಂದ ಪಡೆದ ಆದೇಶವನ್ನು ತೋರಿಸಿದಾಗ, ಈ ಆದೇಶಗಳಿಂದ ನಮಗೇನೂ ವ್ಯತ್ಯಾಸವಾಗುವುದಿಲ್ಲ ಎಂದು ದರ್ಪ ತೋರಿದ ಕಾರಣ ಆದೇಶದ ಉಲ್ಲಂಘನೆಯ ಕುರಿತಾಗಿ, ವಾದಿಗಳು ಮತ್ತೆ ತಮ್ಮ ವಕೀಲರ ಮುಖಾಂತರ ನ್ಯಾಯಾಲಯದ ಮೊರೆಹೋದರು. ಶಿರಸಿಯ ‘ ಜೆಎಮ್‌ಎಫ್‌ಸಿ ನ್ಯಾಯಾಲಯವು ವಾದವನ್ನು ಆಲಿಸಿ ಪ್ರಕರಣ ದಾಖಲಿಸಿಕೊಂಡು ತನ್ನ ಆದೇಶವನ್ನು ಉಲ್ಲಂಘಿಸಿ ದರ್ಪ ಮೆರೆದ ಅಧಿಕಾರಿಗಳಿಗೆ ನೋಟಿಸ್ ನೀಡಿ ಪ್ರಕರಣದಲ್ಲಿ ಹಾಜರಾಗುವಂತೆ ಆದೇಶಿಸಿದೆ.ವಾದಿಗಳ ಪರವಾಗಿ ವಕೀಲ ಸುರೇಶ್ ಎಮ್. ದೇಶಭಂಡಾರಿ ವಾದಿಸಿದ್ದರು.