Slide
Slide
Slide
previous arrow
next arrow

ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ

300x250 AD

ಮಹಿಳೆ ಸದೃಢವಾದರೆ ಕುಟುಂಬ, ಸಮಾಜದ ಉನ್ನತಿ: ಕಾಗೇರಿ

ಶಿರಸಿ: ಮಹಿಳೆಯರು ಸುಶಿಕ್ಷಿತರಾಗಿ, ಆರ್ಥಿಕವಾಗಿ ಸದೃಢರಾದಾಗ ಆ ಕುಟುಂಬ, ಸಮಾಜದ ಉನ್ನತಿ ಸಾಧ್ಯವಾಗುತ್ತದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ನಗರದ ನೆಮ್ಮದಿ ರಂಗಧಾಮದಲ್ಲಿ ಭಾನುವಾರ ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಸಾಮಾನ್ಯ ಸಭೆಯ ಅಂಗವಾಗಿ ಆಯೋಜಿಸಿದ್ದ ಮಹಿಳಾ ಸಮಾವೇಶ, ಸನ್ಮಾನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ಸಂಸ್ಥೆಗಳ ಕಾರಣದಿಂದ ಮಹಿಳೆಯರು ಸಂಘಗಳ ಚಟುವಟಿಕೆಯಲ್ಲಿ ಹೆಚ್ಚೆಚ್ಚು ತೊಡಗಿದ್ದಾರೆ. ಇದರಿಂದ ಮಹಿಳೆಯರು ಸಾಕಷ್ಟು ಜಾಗೃತರಾಗಿದ್ದಾರೆ. ಶ್ರಮಿಕ ಮಹಿಳೆಯರು ಸೇರಿ ತಮಗಾಗಿ ಕಟ್ಟಿಕೊಂಡ ಸ್ಕೊಡವೆಸ್ ಮಹಿಳಾ ಸೌಹಾರ್ದ ಸಹಕಾರಿಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಶ್ರಮಿಕ ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಆಗಿರುವುದು ಶ್ಲಾಘನೀಯ. ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಈಗಾಗಲೇ ಹೆಜ್ಜೆ ಗುರುತು ಮೂಡಿಸಿರುವ ಸ್ಕೊಡವೆಸ್ ಮಹಿಳಾ ಸೌಹಾರ್ದ ಸಹಕಾರಿ ಇನ್ನೂ ಹಲವಾರು ಮೈಲಿಗಲ್ಲುಗಳನ್ನು ತಲುಪಲಿ ಎಂದು ಹಾರೈಸಿದರು.

ಮಹಿಳೆಯರು ಇಂದು ಕೇವಲ ಅಡುಗೆ ಮನೆಗೆ ಸೀಮಿತರಾಗದೇ ಸಮಾಜದ, ಸರಕಾರ ಜತೆಯಲ್ಲಿ ಕೆಲಸ ಮಾಡಲು ಸಮರ್ಥರಿದ್ದೇವೆ ಎಂಬುದನ್ನು ತೋರಿಸುತ್ತಿದ್ದಾರೆ. ಇದರ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರಿಗೆ ಶೇ ೩೩ರಷ್ಟು ಮೀಸಲಾತಿ ಮಾಡುವಂತಾಯಿತು ಎಂದು ಶ್ಲಾಘಿಸಿದರು.

ಮಹಿಳೆಯರು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಎಂಎಲ್‌ಎ ಹಾಗೂ ಎಂಪಿಗಳಾಗಿ ಯಾವ ಪುರುಷರಿಗೂ ಕಡಿಮೆ ಇಲ್ಲದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಾಗೇರಿ ಮೆಚ್ಚುಗೆ ವ್ಯಕ್ತಪಡಿಸಿದರು. ಅ.2ರಂದು ಜನಾಂದೋಲನ ರೂಪದಲ್ಲಿ ಸ್ವಚ್ಛತಾ ಅಭಿಯಾನ ನಡೆಯಬೇಕು. ಇದಕ್ಕೆ ಸ್ವ ಸಹಾಯ ಸಂಘಗಳು ಕೈಜೋಡಿಸಬೇಕು ಎಂದು ಸಂಸದ ಕಾಗೇರಿ ಮನವಿ ಮಾಡಿದರು.

ಇದೊಂದು ವಾರ್ಷಿಕ ಮಹಾಸಭೆ ಆಗಿದ್ದರೂ ಮಹಾಸಭೆಯೊಂದಿಗೆ ಇದನ್ನೊಂದು ಮಹಿಳಾ ಸಮಾವೇಶವಾಗಿ ಮಾಡಿ ಎಲ್ಲ ಸದಸ್ಯರು ಸಂಭ್ರಮದಿಂದ ಪಾಲ್ಗೊಳ್ಳುವ ಹೊಸ ರೀತಿಯ ಕಾರ್ಯಕ್ರಮವಾಗಿ ರೂಪಿಸಿದ ಸರಸ್ವತಿ ಎನ್.ರವಿ ಅವರನ್ನು ಅಭಿನಂದಿಸಿದರು.

300x250 AD

ಇದೇ ಸಂದರ್ಭದಲ್ಲಿ ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಸ್ಥಾಪನೆಗೆ ಪ್ರೇರಕ ಶಕ್ತಿಯಾಗಿ, ಪ್ರಾರಂಭದಿಂದಲೂ ಸಂಘದ ಬೆಳವಣಿಗೆಗೆ ಸಹಕರಿಸಿದ ಸ್ಕೊಡ್‌ವೆಸ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕರವರನ್ನು ಸಂಸದ ಕಾಗೇರಿಯವರು ಸನ್ಮಾನಿಸಿದರು.

ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಸರಸ್ವತಿ ಎನ್.ರವಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ನಡೆದು ಬಂದ ಹಾದಿಯ ಕುರಿತು ವಿವರಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಡಾ.ಸುಮನ್ ಹೆಗಡೆ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಹಾಗೂ ಸ್ಕೊಡ್‌ವೆಸ್ ಸಂಸ್ಥೆ ನಿರ್ದೇಶಕ ಪ್ರೊ.ಕೆ.ಎನ್.ಹೊಸ್ಮನಿ ಸಂದರ್ಭೋಚಿತವಾಗಿ ಮಾತನಾಡಿದರು. ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿ ಉಪಾಧ್ಯಕ್ಷೆ ಹೇಮಲತಾ ಚೌಗಲೆ ಹಾಗೂ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.

ವಸುಧಾ ಹೆಗಡೆ, ನಾದಶ್ರೀ ಮತ್ತು ಪ್ರತಿಭಾ ಪ್ರಾರ್ಥಿಸಿದರು. ಮೇಘನಾ ಮತ್ತು ಉಮೇಶ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಾಹಕ ಗಣಪತಿ ನಾಯ್ಕ ವಂದಿಸಿದರು. ಸಭೆಯಲ್ಲಿ ಉತ್ತರಕನ್ನಡ ಜಿಲ್ಲೆ ಹಾಗು ಹಾವೇರಿಯಿಂದ ೬೫೦ಕ್ಕೂ ಮಹಿಳಾ ಸದಸ್ಯೆಯರು ಪಾಲ್ಗೊಂಡರು.ಈ ಸಂದರ್ಭದಲ್ಲಿ ಸ್ವಸಹಾಯ ಸಂಘದಲ್ಲಿ ವಿಶೇಷ ಸಾಧನೆ ಮಾಡಿದ ಮಹಿಳಾ ಸದಸ್ಯೆಯರಿಗೆ, ಪಿಗ್ಮಿ ಸಂಗ್ರಹಕರಾರರು ಹಾಗೂ ಸಹಕಾರಿ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಸೌಹಾರ್ದ ಸಹಕಾರಿ ಸಂಘಗಳು ಒಳ್ಳೆಯ ಕೆಲಸ ಮಾಡುವ ಮೂಲಕ ಜಿಲ್ಲೆಯ ಸಹಕಾರಿ ಕ್ಷೇತ್ರದ ಘನತೆ, ಗೌರವ ಇನ್ನಷ್ಟು ಹೆಚ್ಚಿಸುವಂತಾಗಬೇಕು.–ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ

Share This
300x250 AD
300x250 AD
300x250 AD
Back to top