ಶಿರಸಿ: ಯಕ್ಷಗಾನದ ಹಿರಿಯ ಕಲಾವಿದ ಯಕ್ಷ ವಿಭೂಷಣ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಪರಿಕಲ್ಪನೆಯಲ್ಲಿ ಹಾಗೂ ಮಣ್ಣಿಗೆಯ ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ನ ಆಯೋಜನೆಯಲ್ಲಿ ಈ ವರ್ಷದಿಂದ ಕೊಡಮಾಡಲು ಉದ್ದೇಶಿಸಿದ ‘ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ’ ಪ್ರಶಸ್ತಿ ನೀಡಲು ತೀರ್ಮಾನಿಸಿದೆ. ಪ್ರಥಮ ಪ್ರಶಸ್ತಿಗೆ ಹಿರಿಯ ವಿದ್ವಾಂಸ, ಶತಾವಧಾನಿ,ಯಕ್ಷಗಾನ ಕ್ಷೇತ್ರಕ್ಕೂ ಭಾರತೀಯ ಸಾಂಸ್ಕೃತಿಕ ಕ್ಷೇತ್ರಕ್ಕೂ ಮಹೋನ್ನತ ಕೊಡುಗೆ ನೀಡಿದ ಡಾ. ಆರ್.ಗಣೇಶ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಸಭೆ ನಡೆಸಿದ ಹಿರಿಯ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಹೆರವಟ್ಟ, ಟ್ರಸ್ಟ್ ನ ಸಂಸ್ಥಾಪಕ ಸಂತೋಷ ಯಾಜಿ ಅವರು ಒಳಗೊಂಡ ಸಮಿತಿ ಸರ್ವಾನುಮತದಿಂದ ಈ ಆಯ್ಕೆ ಮಾಡಿದೆ.
ಈ ಪ್ರಶಸ್ತಿ ಪ್ರತಿ ವರ್ಷ ಯಕ್ಷಗಾನ ದಿನವಾದ ನ.12ರಂದು ಪ್ರದಾನ ಮಾಡಲಾಗುತ್ತದೆ. ಈ ಬಾರಿ ಹೊನ್ನಾವರ ತಾಲೂಕಿನ ಇಡಗುಂಜಿ ಸಮೀಪದ ಮಣ್ಣಿಗೆ ಗ್ರಾಮದ ರಂಗಶ್ರೀಧರದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಮೌಲ್ಯದ ಜೊತೆಯಲ್ಲಿ ರಜತ ಕಡಗ, ಪ್ರಶಸ್ತಿ ಪತ್ರ ಹಾಗೂ ರೇಷ್ಮೆ ಶಾಲು ಗೌರವದೊಂದಿಗೆ ಪ್ರದಾನ ಮಾಡಲಾಗುತ್ತದೆ. ಸಂಗೀತ, ಸಾಹಿತ್ಯ, ಕಲೆ ಹಾಗೂ ಕ್ರೀಡಾ ಕ್ಷೇತ್ರಗಳ ರಾಷ್ಟ್ರೀಯ ಅಂತರಾಷ್ಟ್ರೀಯ ಸಾಧಕರನ್ನು ಮಾತ್ರ ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲು ಇದೇ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಾಧಕರು ದೇಶದ ಜಗತ್ತಿನ ಯಾವ ಪ್ರದೇಶದಲ್ಲಿದ್ದರೂ ಉತ್ತರ ಕನ್ನಡ ಜಿಲ್ಲೆಯ ಜೊತೆಗಿನ ಅವರ ನಿಕಟ ಬಾಂಧವ್ಯವನ್ನು ಆಧರಿಸಿ ಗೌರವಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.