ವಾಮಾಚಾರದ ಕುರುಹು: ಪೋಲಿಸ್‌ಗೆ ದೂರು
ಯಲ್ಲಾಪುರ: ಪಟ್ಟಣದ ಈಶ್ವರ ದೇವಸ್ಥಾನದ ಅಭಿವೃದ್ಧಿ ಸಲುವಾಗಿ ಕಾರ್ಯ ಕೈಗೊಳ್ಳುವ ಸಂದರ್ಭದಲ್ಲಿ ಕೆಲವು ವಿಘ್ನಸಂತೋಷಿಗಳು ಅದಕ್ಕೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ, ಅಂಥವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಈಶ್ವರ ದೇವಸ್ಥಾನ ಆಡಳಿತ ಸಮಿತಿ ಕಾರ್ಯದರ್ಶಿ ಶಿವು ಪ್ರಕಾಶ ಕವಳಿ ಹೇಳಿದರು.
ಅವರು ಶನಿವಾರ ಈಶ್ವರ ದೇವಸ್ಥಾನದ ಸಭಾಭವನದಲ್ಲಿ ದೇವಸ್ಥಾನದ ಅಭಿವೃದ್ಧಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇವಸ್ಥಾನದ ಜೀರ್ಣೋದ್ಧಾರದ ಸಲುವಾಗಿ ವೈದಿಕರ ಮಾರ್ಗದರ್ಶನದಲ್ಲಿ ದೇವತಾ ಕೆಲಸ ಮಾಡುವ ಹಂತದಲ್ಲಿ ದೇವಸ್ಥಾನದ ಸುತ್ತ ವಾಮಾಚಾರ ಇತ್ಯಾದಿ ಮಾಡುವ ಮೂಲಕ ಅಡೆತಡೆ ಮಾಡಲಾಗುತ್ತಿದೆ. ಇಂತಹ ದುಷ್ಟ ಶಕ್ತಿಗಳ ನಿಗ್ರಹ ಸಂಬಂಧ ಪೊಲೀಸ್ ದೂರು ನೀಡಲಾಗುತ್ತದೆ. ಈಗಾಗಲೇ ದೇವಸ್ಥಾನದ ಸುತ್ತಮುತ್ತ ಸಿಸಿಟಿವಿ ಅಳವಡಿಸಲಾಗಿದೆ ಎಂದರು.
ಇದು ಪುರಾತನವಾದ ದೇವಸ್ಥಾನವಾಗಿದೆ. ದೇವಸ್ಥಾನದ ಜಾಗ ಅತಿಕ್ರಮಣ ಆಗಿರುವುದನ್ನು ಸರಿಪಡಿಸಬೇಕು. ಅನ್ಯರ ದಬ್ಬಾಳಿಕೆಯಿಂದ ವಿರೂಪಗೊಂಡು, ಭಿನ್ನವಾದ ಮೂರ್ತಿಯನ್ನು ಬದಲಿಸಬೇಕಾಗಿದೆ. ಆಗಮಶಾಸ್ತ್ರದ ಪ್ರಕಾರ ನಾಗದೇವರು, ಶಿವಲಿಂಗ, ನಂದಿ ವಿಗ್ರಹವನ್ನು ಮಾಡಿ ಪ್ರತಿಷ್ಠಾಪಿಸಿ ಆ ನಂತರ ನೂತನ ಶಿಲಾಮಯ ದೇವಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಭಕ್ತರ ಸಹಕಾರ ಅಗತ್ಯ ಎಂದರು.
ಸಮಿತಿಯ ಉಪಾಧ್ಯಕ್ಷ ಶೇಖರ ಶೇಟ್,ಖಜಾಂಚಿ ಸಂತೋಷ ಗುಡಿಗಾರ, ಪಪಂ ಸದಸ್ಯ ಆದಿತ್ಯ ಗುಡಿಗಾರ, ಪ್ರಮುಖರಾದ ಅರುಣ ಶೆಟ್ಟಿ, ಗಜಾನನ ನಾಯ್ಕ, ಸುಧೀರ ಕೊಡ್ಕಣಿ, ಅರ್ಚಕ ಶ್ರೀಪಾದ ಭಟ್ಟ ಇದ್ದರು.