ದಾಂಡೇಲಿ : ಮಂಡ್ಯದಲ್ಲಿ ಡಿ.20ರಿಂದ ಮೂರು ದಿನಗಳವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ 87 ದಿನಗಳವರೆಗೆ ನಾಡಿನಾದ್ಯಂತ ಸಂಚರಿಸಲಿರುವ ‘ಕನ್ನಡ ಜ್ಯೋತಿ ರಥ’ವು ಸೆ.24ರಂದು ದಾಂಡೇಲಿ ನಗರಕ್ಕೆ ಆಗಮಿಸುವ ನಿಟ್ಟಿನಲ್ಲಿ ಈ ತಾಲ್ಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಪೂರ್ವಭಾವಿ ಸಭೆಯು ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಸೆ:24 ರಂದು ಬೆಳಿಗ್ಗೆ 11:30 ಗಂಟೆಗೆ ನಗರದ ಕೆಸಿ ವೃತ್ತಕ್ಕೆ ಆಗಮಿಸುವ ಕನ್ನಡ ಜ್ಯೋತಿ ರಥವು ಬಸ್ ನಿಲ್ದಾಣಕ್ಕೆ ಬರಲಿದೆ. ಬಸ್ ನಿಲ್ದಾಣದಿಂದ ನಗರ ಸಭೆಯವರೆಗೆ ಭವ್ಯ ಮೆರವಣಿಗೆಯ ಮೂಲಕ ಕರೆ ತರಲಾಗುವುದು. ಮೆರವಣಿಗೆಯಲ್ಲಿ ಬ್ಯಾಂಡ್ ಸೆಟ್ನೊಂದಿಗೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಮೆರವಣಿಗೆಯಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಸರ್ವರು ಸಹಕರಿಸುವಂತೆ ವಿನಂತಿಸಿದರು.
ಸಭೆಯಲ್ಲಿ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ, ನಗರಸಭೆಯ ಉಪಾಧ್ಯಕ್ಷೆ ಶಿಲ್ಪಾ ಕೋಡೆ, ತಾಲೂಕು ಪಂಚಾಯತ್ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಪ್ರಮೋದ್ ಮಹಾಲೆ, ನಗರಸಭಾ ಸದಸ್ಯರುಗಳಾದ ಮೋಹನ ಹಲವಾಯಿ, ಅನಿಲ್ ನಾಯ್ಕರ್, ರುಕ್ಮಿಣಿ ಬಾಗಡೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.