ದಾಂಡೇಲಿ : ಅಕ್ರಮವಾಗಿ ವನ್ಯಜೀವಿಗಳ ಅಂಗಾಂಗಗಳನ್ನು ದಾಸ್ತಾನಿಟ್ಟಿದ್ದ ಆರೋಪಿಯನ್ನು ಮಾಲು ಸಹಿತ ಬಂಧಿಸಿದ ಘಟನೆ ಗಾಂಧಿನಗರದಲ್ಲಿ ಶುಕ್ರವಾರ ನಡೆದಿದೆ.
ಗಾಂಧಿನಗರದ ನಿವಾಸಿ ಪಕ್ರುಸಾಬ ರಾಜೇಸಾಬ ಶೇಖ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ. ಈತನು ಗಾಂಧಿನಗರದ ತನ್ನ ಮನೆಯಲ್ಲಿ ವನ್ಯಜೀವಿಗಳ ಅಂಗಾಂಗಗಳನ್ನು ಅಕ್ರಮವಾಗಿ ದಾಸ್ತಾನಿಟ್ಟಿದ್ದ ಖಚಿತ ಮಾಹಿತಿಯಡಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಕೆ.ಸಿ.ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ್ ಚೌವ್ಹಾಣ್ ಅವರ ಮಾರ್ಗದರ್ಶನದಲ್ಲಿ ದಾಂಡೇಲಿಯ ವಲಯ ಅರಣ್ಯಾಧಿಕಾರಿ ಎನ್.ಎಲ್. ನಧಾಪ್ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಲೋಕೇಶ್, ಸಂದೀಪ ನಾಯ್ಕ್ ಮತ್ತು ಆನಂದ್ ರಾಥೋಡ್ ಹಾಗೂ ಸಿಬ್ಬಂದಿಗಳಾದ ಸಂದೀಪ್ ಗೌಡ, ಪ್ರಹ್ಲಾದ್, ನಾರಾಯಣ, ಸವಿತಾ ಅವರನ್ನೊಳಗೊಂಡ ತಂಡ ಪಕ್ರುಸಾಬ ರಾಜೇಸಾಬ ಶೇಖ ಈತನ ಗಾಂಧಿನಗರದ ಮನೆಯಲ್ಲಿ ಶೋಧ ನಡೆಸಿದಾಗ ಜಿಂಕೆ ಕೊಂಬು ಮತ್ತು ಕಾಡುಕೋಣ ಕೊಂಬು ತಲಾ ಒಂದೊಂದು ಜೊತೆ ಅಕ್ರಮವಾಗಿ ದಾಸ್ತಾನು ಇಟ್ಟಿರುವುದು ಪತ್ತೆಯಾಗಿದೆ.
ಈ ಸಂದರ್ಭದಲ್ಲಿ ಅಕ್ರಮವಾಗಿ ದಾಸ್ತಾನಿಟಿದ್ದ ವನ್ಯಜೀವಿಗಳ ಅಂಗಾಂಗಗಳನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ಪಕ್ರುಸಾಬ ರಾಜೇಸಾಬ ಶೇಖ ಈತನ ಮೇಲೆ ವನ್ಯಜೀವಿ ಸಂರಕ್ಷಣ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.