ಅಂಕೋಲಾ: ತಾಲೂಕಿನ ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ಪಾರ್ಕಿಂಗ್ ಸ್ಥಳದಲ್ಲಿದ್ದ ಕಸದ ರಾಶಿ ಕಂಡು, ಇದೇ ರೀತಿ ಮುಂದುವರೆದರೆ ಐ.ಆರ್.ಬಿ. ಸಂಸ್ಥೆಗೆ ದಂಡ ವಿಧಿಸಲು ಕ್ರಮಕೈಗೊಳ್ಳುವಂತೆ ಅಂಕೋಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಎಮ್ ಸೂಚನೆ ನೀಡಿದರು.
ಅವರು ಗುರುವಾರ ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾಳೆಗುಳಿ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಪಾರ್ಕಿಂಗ್ ಸ್ಥಳದಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ-2024 ಅಂಗವಾಗಿ ನಡೆದ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಎಂಬ ಧ್ಯೇಯ ವಾಕ್ಯದಡಿ ಸೆಪ್ಟೆಂಬರ್ 17 ರಿಂದ ನಡೆಯುತ್ತಿರುವ ಸ್ವಚ್ಛತಾ ಹೀ ಸೇವಾ ಪಾಕ್ಷಿಕವು ಅಕ್ಟೋಬರ್ 2 ರ ವರೆಗೂ ನಡೆಯಲಿದ್ದು, ಈ ಅವಧಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶವನ್ನು ಶುಚಿಗೊಳಿಸುವುದು ಮಾತ್ರವಲ್ಲದೇ ಸ್ವಚ್ಛತೆಯೇ ಜೀವನದ ಭಾಗವಾಗುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಪಂಚಾಯತ್ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಎನ್.ಆರ್.ಎಲ್.ಎಮ್. ಸಂಜೀವಿನಿ ಕೃಷಿ ಸಖಿ, ಪಶು ಸಖಿ, ಸಂಘದ ಸದಸ್ಯರು, ನರೇಗಾ ಕೂಲಿಕಾರರು ಹಾಗೂ ಗ್ರಾಮಸ್ಥರು ಸೇರಿದಂತೆ ಎಂಬತ್ತಕ್ಕೂ ಹೆಚ್ಚು ಜನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಎಲ್ಲರೂ ಸ್ವಚ್ಛತಾ ಆಂದೋಲನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಅಲಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಜಗನ್ನಾಥ ನಾಯ್ಕ, ಉಪಾಧ್ಯಕ್ಷ ಶೋಭಾ ಗೋವಿಂದ ಆಗೇರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ್ ತಳವಾರ, ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ಉಪಸ್ಥಿತರಿದ್ದರು.