Slide
Slide
Slide
previous arrow
next arrow

ಕಲೆ ಬಾಳಿನ ಸಂಭ್ರಮ-ಸಂಕಟಗಳಿಗೆ ಕನ್ನಡಿಯಾಗಬೇಕು: ಕೃಷ್ಣಮೂರ್ತಿ ಹೆಬ್ಬಾರ್

300x250 AD

ಶಿರಸಿ: ಹುಟ್ಟಿದ ಪ್ರತಿ ಜೀವಿಯ ನಡೆ-ನುಡಿ, ಬರಹ ಕೃಷಿ ,ಚಿತ್ರಕಲೆ ಸಹಿತ ಪ್ರತಿ ಕೃತಿಯಲ್ಲೂ ಕಲೆ ಇರುತ್ತದೆ. ಅದನ್ನು ನೋಡುವ ಆಸ್ವಾದಿಸುವ ಕಣ್ಣು ಮನಸ್ಸುಗಳು ಇರುವವರಿಗೆ ಅದು ಕಾಣುತ್ತದೆ. ಜಗತ್ತಿನ ಸಂಕಟ ಸಂಭ್ರಮಗಳಿಗೆ ಕಲೆ ಕನ್ನಡಿ ಹಿಡಿದಾಗ ಆ ಕಲೆ ಧನ್ಯತೆ ಪಡೆಯುತ್ತದೆ ಎಂದು ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ ನುಡಿದರು.

ಸೆ.16ರಂದು ಶಿರಸಿಯ ನೆಮ್ಮದಿ ಕೇಂದ್ರದ ರಂಗಧಾಮದಲ್ಲಿ ಶಿರಸಿಯ ‘ಎಲ್ಲೋಕ್ ಚಿತ್ರಕಲಾ ತರಬೇತಿ ಕೇಂದ್ರ’ದ ವಾರ್ಷಿಕ ಕಲಾ ಪ್ರದರ್ಶನ ಹಾಗೂ ಚಿತ್ರಕಲೆಯ ಮೇಲಿನ ಉಪನ್ಯಾಸಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಲಾವಿದರ ಚಿತ್ರ ಕಲಾವಿದರ ಜಗತ್ತು ದಿನದಿಂದ ದಿನಕ್ಕೆ ಅಸಂಘಟಿತವಾಗುತ್ತಿದ್ದು ಉತ್ತರ ಕನ್ನಡದಲ್ಲಿ ಚಿತ್ರ ಕಲಾವಿದರ ಒಕ್ಕೂಟವನ್ನು ಮಾಡಿ ಅವರ ಭಾವಚಿತ್ರ ಸಹಿತ ಸಂಪರ್ಕ ವಿಳಾಸ ವಿವರಗಳಿರುವ ಒಂದು ಕೈಪಿಡಿಯನ್ನು ತುರ್ತಾಗಿ ಪ್ರಕಟಿಸುವ ಅವಶ್ಯಕತೆ ಇದೆ. ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಸದಸ್ಯರಾದ ಶ್ರೀಮತಿ ಶಾಂತಾ ಪಿ.ಕೊಲ್ಲೆಯವರು ಅದನ್ನು ತಮ್ಮ ಕಾಲಾವಧಿಯಲ್ಲಿ ಮಾಡಿ ನಾಡಿಗೆ ಮಾದರಿಯಾಗಬೇಕು ಎಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಕಲಾವಿದರಾದ ಜಿ.ಎಮ್. ಹೆಗಡೆ ತಾರಗೋಡ ಅವರು ಶಿರಸಿ ತಾಲೂಕಿನಲ್ಲಿಯ ಚಿತ್ರಕಲೆಯ ಬಗ್ಗೆ ಅಧ್ಯಯನ ಮಾಡಲು ಹಾಗೂ ಇಲ್ಲಿಯ ಚಿತ್ರಕಲಾವಿದರಿಗೆ ತಮ್ಮ ಕಲಾಕೃತಿಗಳ ಪ್ರದರ್ಶನ ಮಾಡಲು ಅವಶ್ಯಕ ಇರುವ ಒಂದು ಕಲಾ ಕೇಂದ್ರವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರೇಖಾಚಿತ್ರಕಲೆ ಕುರಿತು ಉಪನ್ಯಾಸ ನೀಡಿದ ಡಾ. ಬಸವರಾಜ್ ಎಸ್. ಕಲೆಗಾರ ಅವರು ರೇಖಾ ಚಿತ್ರಕಲೆ ಮಾನವನ ವಿಕಾಸದ ಕೈಗನ್ನಡಿಯಾಗಿ ಲಿಪಿಯ ಮೂಲಕ ಚಿತ್ರಗಳ ಮೂಲಕ ಹೊರಹೊಮ್ಮಿದೆ. ಇಂದು ರೇಖಾಚಿತ್ರಕಲೆ ಇತಿಹಾಸದ ಬೆಳವಣಿಗೆಯ ಮೂಲ ದಾಖಲೆಯಾಗಿ ಮುನ್ನಡೆದಿದೆ ಅದಕ್ಕೆ ಪ್ರೋತ್ಸಾಹದ ಅಗತ್ಯವಿದೆ ಎಂದರು.

300x250 AD

ಮತ್ತೋರ್ವ ಅತಿಥಿಯಾದ ಸಿದ್ದಾಪುರದ ಕಲಾ ಶಿಕ್ಷಕ ಕೆ. ಬಿ.ವಿರಲಿಂಗನಗೌಡ ಮಾತನಾಡಿ ಇಂದು ಎಲ್ಲರೂ ಹಣದ ಹಿಂದೆ ಬಿದ್ದಿದ್ದಾರೆ. ಮಕ್ಕಳನ್ನು ಕಲೆ ಹಾಗೂ ಸಾಂಸ್ಕೃತಿಕ ಆಸಕ್ತಿಯ ಚಟುವಟಿಕೆಗಳಿಂದ ವ್ಯವಸ್ಥಿತವಾಗಿ ದೂರ ಇಡುವ ಇಂದಿನ ಪಾಲಕರ ಮನಸ್ಥಿತಿಯಿಂದ ಮಕ್ಕಳು ಅನಾಥ ಪ್ರಜ್ಞೆಯಿಂದ ನರಳುವಂತಾಗಿದೆ. ಅವರ ಬಹುಮುಖ ಸೃಜನಶೀಲ ಚಟುವಟಿಕೆಗಳು ಸಾಮರ್ಥ್ಯಗಳು ಅಲಕ್ಷಕ್ಕೆ ಒಳಗಾಗಿವೆ. ಅವನ್ನು ಪ್ರೋತ್ಸಾಹಿಸಲು ಪ್ರತಿಯೊಂದು ಚಿತ್ರಕಲೆ ಸಹಿತ ಲಲಿತ ಕಲೆಗಳನ್ನು ಕಲಿಸುವ ಶಿಕ್ಷಕರ ಮಾರ್ಗದರ್ಶಕರ ಅವಶ್ಯಕತೆ ಇದೆ . ಅಂತಹ ಕೆಲಸವನ್ನು ಮಾಡುತ್ತಿರುವ ಶ್ರೀಮತಿ ಶಾಂತಾ ಕೊಲ್ಲೆಯವರ ಕೆಲಸ ಅನುಕರಣೀಯ ಎಂದವರು ನುಡಿದರು.

ಸಭಾಧ್ಯಕ್ಷತೆ ವಹಿಸಿದ ಕಾರ್ಯಕ್ರಮದ ಸಂಘಟಕರಾದ ಶ್ರೀಮತಿ ಶಾಂತಾ ಪಿ. ಕೊಲ್ಲೆಯವರು ಮಾತನಾಡಿ ಬರುವದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಲಾವಿದರ ಕೈಪಿಡಿಯನ್ನು ಪ್ರಕಟಿಸಲು ಯತ್ನಿಸುತ್ತೇನೆ. ಚಿತ್ರಕಲೆಯ ಮೂಲಕ ಜಗತ್ತಿನ ಚೈತನ್ಯವನ್ನು ಸೆರೆ ಹಿಡಿಯುವ ಅಪಾರ ಶಕ್ತಿ ಪ್ರತಿ ಕಲಾವಿದನಿಗೆ ಇದೆ ಅದನ್ನು ಚಿತ್ರಕಲಾವಿದರು ಸಮರ್ಪಕವಾಗಿ ಬಳಸಿಕೊಂಡು ನಾಡಿನ ಸಂಪತ್ತಾಗಬೇಕು. ನಾವು ಚಿತ್ರಕಲೆ ಬೆಳವಣಿಗೆಗಾಗಿ ಮಾಡುತ್ತಿರುವ ಎಲ್ಲ ಕೆಲಸಗಳಿಗೆ ಸಾರ್ವಜನಿಕರು ಕಲಾಸಕ್ತರು ಸಹಕರಿಸಿ ಮುನ್ನಡೆಸಬೇಕು ಹಾಗೂ ಶಿರಸಿಯಲ್ಲಿ ಚಿತ್ರಕಲಾಕೇಂದ್ರದ ಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲಾ ಕಲಾವಿದರು ಒಗ್ಗೂಡಬೇಕೆಂದು ಎಂದು ಅವರು ಕರೆ ನೀಡಿದರು.

ಸಭೆಯಲ್ಲಿ ಪತ್ರಕರ್ತ ಗಿರಿಧರ್ ಕಬ್ನಳ್ಳಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಸ್ವಾಗತ ಕೋರಿದರು. ಕುಮಾರಿ ವೇದಿಕ ಸಂಗಡಿಗರ ಪ್ರಾರ್ಥನೆ. ಸಂಜನಾ ಸಂಗಡಿಗರ ಸ್ವಾಗತ ಗೀತೆ ,ವಿವಿಧ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆಗಳು ಸಾಂಗವಾಗಿ ನಡೆದವು.
ಈ ಸಭೆಯಲ್ಲಿ ಹೊನ್ನಾವರ ತಾಲೂಕಿನ ಕೊಡಾಣಿಯ ಚಿತ್ರಕಲಾ ಶಿಕ್ಷಕ ನಾಗರಾಜ್ ಶೇಟ್ ಅವರನ್ನು ಅಭಿಮಾನದಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಬಿಡಿಸಿದ ವೈವಿಧ್ಯಪೂರ್ಣ ಚಿತ್ರಗಳ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ನಂತರ ಸಾತ್ವಿಕ್ ಹಾಗೂ ಚೈತನ್ಯರ ಹಾಡು, ಸನ್ನಿಧಿ ,ಸಮುದ್ಯತಾ, ಸಂಧ್ಯಾ , ಹಾಗೂ ಪ್ರವೀಣ್ ಶೇಟ ಸಂಜನ ಅವರ ಹಾಡು ಹಾಗೂ ಸಿತಾರ್ ವಾದನಗಳು ನಡೆದು ಪ್ರೇಕ್ಷಕರನ್ನು ರಂಜಿಸಿದವು. ಕಲಾಕೇಂದ್ರದ ವಿವಿಧ ವಿದ್ಯಾರ್ಥಿಗಳು ಅತಿಥಿಗಳನ್ನು ಬಹು ಅರ್ಥಪೂರ್ಣವಾಗಿ ಸಭೆಗೆ ಪರಿಚಯಿಸಿದರು.
ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಬಹು ಸುಂದರವಾಗಿ ಸಾದರಪಡಿಸಿದ ಚಿತ್ರಗಳನ್ನು ನೋಡಿ ಆಗಮಿಸಿದ ಸಭಿಕರು ಅತಿಥಿಗಳು ವೀಕ್ಷಣೆಯ ನಂತರ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

Share This
300x250 AD
300x250 AD
300x250 AD
Back to top