ಕಾರವಾರ: ಗ್ರಾಮ ಪಂಚಾಯತಿಗಳಿಂದ ಮಹಾತ್ಮ ಗಾಂಧಿ ನರೇಗಾದಡಿ ಕೈಗೊಳ್ಳುವ ಕಾಲುವೆ, ಅರಣ್ಯ ಕಾಂಟೂರ ಟ್ರಂಚ್, ಕೆರೆ, ಶಾಲಾ ಸಮಗ್ರ ಅಭಿವೃದ್ಧಿಯಂತಹ ಸಮುದಾಯ ಕಾಮಗಾರಿಯಲ್ಲಿ ಗ್ರಾಮೀಣ ಜನರಿಗೆ ನಿರಂತರವಾಗಿ ಕೂಲಿ ಕೆಲಸ ಹಾಗೂ ವೈಯಕ್ತಿಕವಾಗಿ ದನದ ಕೊಟ್ಟಿಗೆ, ಜೈವಿಕ ಅನಿಲ, ಕೊಳವೆ ಬಾವಿ ಮರುಪೂರಣ ಘಟಕ, ಕುರಿ, ಕೋಳಿ ಶೆಡ್, ಅಡಿಕೆ, ದಾಳಿಂಬೆ, ಚಿಕ್ಕು, ಪಪ್ಪಾಯಿ, ತೆಂಗು, ರೇಷ್ಮೆ, ಎಲೆ ಬಳ್ಳಿ, ಗುಲಾಬಿ, ಮಲ್ಲಿಗೆ ತೋಟ ನಿರ್ಮಾರ್ಣದಂತಹ ಕಾಮಗಾರಿಗಳು ಲಭ್ಯವಿದ್ದು, ಪ್ರತಿಯೊಬ್ಬರೂ ಗ್ರಾಮ ಪಂಚಾಯತಿಗಳಿಗೆ ಭೇಟಿನೀಡಿ ಅರ್ಜಿ ಸಲ್ಲಿಸುವ ಮೂಲಕ ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಾಲ್ಲೂಕಾ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮುಂಡಗೋಡ ತಾಲ್ಲೂಕಿನ ನಾಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹನುಮಾಪುರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಗ್ರಾಪಂ ಜನಪ್ರತಿನಿಧಿಗಳು, ಗ್ರಾಮಸ್ಥರೊಂದಿಗೆ ರೋಜಗಾರ ದಿವಸ್ ಆಚರಣೆ ನಡೆಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರು, ವಿಕಲಚೇತನರು, ಗರ್ಭಿಣಿ-ಬಾಂಣAತಿಯರಿಗೆ ನರೇಗಾ ಕೂಲಿ ಕೆಲಸದಲ್ಲಿ ಶೇ. 50ರಷ್ಟು ರಿಯಾಯಿತಿ ಲಭ್ಯವಿದೆ. ಅಲ್ಲದೇ ಕೂಲಿ ಕೆಲಸದ ಜೊತೆಗೆ ಬಚ್ಚಲು ಗುಂಡಿ, ಕೃಷಿಹೊಂಡ, ದನದ ಶೆಡ್, ಕುರಿ-ಮೇಕೆ ಸಾಕಾಣಿಕೆಗಾಗಿ ಶೆಡ್ ಗಳ ನಿರ್ಮಾಣ ಸೇರಿದಂತೆ ಹಲವು ವೈಯಕ್ತಿಕ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಲು ಅವಕಾಶವಿದೆ ಎಂಬ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಾಗನೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಸಿಂಗನಳ್ಳಿ, ಬಿಎಫ್ಟಿ ಮಂಜುನಾಥ ಪೂಜಾರ, ಗ್ರಾಪಂ ಸಿಬ್ಬಂದಿಗಳಾದ ಮಾರುತಿ ತಿರ್ಲಕ್ಕನವರ, ಸಂದೇಶ ಗುರಪ್ಪನವರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.