ಸಿಪಿಐ ಶ್ರೀಧರ್ ವರ್ಗಾವಣೆ ನಂತರ ಸ್ಥಗಿತಗೊಂಡ ಬಹುಮಾನ ಕಾರ್ಯಕ್ರಮ
ಹೊನ್ನಾವರ : ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಸಿಪಿಐ ಆಗಿ ಕಾರ್ಯನಿರ್ವಹಿಸಿದ್ದ ಜನಸ್ನೇಹಿ ಅಧಿಕಾರಿ ಶ್ರೀಧರ್ ಎಸ್. ಆರ್. ರವರು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನೀಡುತ್ತಿದ್ದ ಪ್ರಶಸ್ತಿ ಮತ್ತು ಬಹುಮಾನ ಕಾರ್ಯಕ್ರಮ ಅವರ ವರ್ಗಾವಣೆ ನಂತರ ಸ್ಥಗಿತಗೊಂಡಿದೆ.
ತಾಲೂಕಾ ಮಟ್ಟದ ಉತ್ತಮ ಗಣೇಶೋತ್ಸವ ಪ್ರಶಸ್ತಿ ಮತ್ತು ಬಹುಮಾನ, ಪ್ರಥಮ ದ್ವಿತೀಯ ಹಾಗೂ ತೃತೀಯ ಎಂದು 3 ಸಮಿತಿಯವರಿಗೆ ಹಾಗೂ ಕೋಮು ಸೌಹಾರ್ದತೆಯ ಸಂದೇಶವನ್ನು ಸಾರುವಂತೆ ವಿಶಿಷ್ಟವಾಗಿ ಗಣೇಶೋತ್ಸವ ಆಚರಿಸಿದ 1 ಸಮಿತಿಯವರಿಗೆ, ಕೋಮು ಸೌಹಾರ್ದತಾ ವಿಶೇಷ ಬಹುಮಾನ ನೀಡಿ ಗೌರವಿಸಲಾಗುತ್ತಿತ್ತು.
ಸಾರ್ವಜನಿಕ ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿಸುವುದು, ಕಾನೂನು ಸುವ್ಯವಸ್ಥೆ ಪಾಲನೆಗೆ ಮತ್ತು ಸಂಚಾರ ಸುವ್ಯವಸ್ಥೆ ಪಾಲನೆಗೆ ಸಮಿತಿಯವರು ಪೊಲೀಸರೊಂದಿಗೆ ಸಹಕರಿಸುವುದನ್ನು ಪ್ರೇರೆಪಿಸುವುದು, ನಾಡು ನುಡಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮತ್ತು ದೇಶಭಕ್ತಿಯನ್ನು ಮೆರೆಯುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಮಿತಿಯವರನ್ನು ಉತ್ತೇಜಿಸುವುದು, ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದು, ಬಹುಮಾನದ ಉದ್ದೇಶವಾಗಿತ್ತು.
ಗಣೇಶೋತ್ಸವ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಸುವ್ಯವಸ್ಥೆ ಪಾಲನೆಗೆ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದವರಿಗೆ ಮತ್ತು ವಿಸರ್ಜನೆ ಸಮಯದಲ್ಲಿ ನುರಿತ ಈಜುಗಾರರಾಗಿ ಸಾರ್ವಜನಿಕರ ಸುರಕ್ಷತೆಗೆ ಸಹಕರಿಸಿದ ಉತ್ತಮ ಸ್ವಯಂ ಸೇವಕರಿಗೆ ಉತ್ತಮ ಸ್ವಯಂ ಸೇವಕ ( Best Volunteer ) ಪ್ರಶಸ್ತಿ ಪತ್ರವನ್ನು ಸಹ ತಾಲೂಕಿನ 20 ಜನರಿಗೆ ನೀಡಿ ಗೌರವಿಸಲಾಗಿತ್ತು.
ಪ್ರಶಸ್ತಿ ಆಯ್ಕೆ ಪಾರದರ್ಶಕವಾಗಿರಲು ನಿರ್ಣಾಯಕ ಸಮಿತಿ ರಚಿಸಿ ಆಯ್ಕೆ ಮಾಡಲಾಗುತ್ತಿತ್ತು, ಸಮಿತಿಯಲ್ಲಿ ತಾಲೂಕಿನ ಹಿರಿಯ ವರದಿಗಾರರು, ತಹಶೀಲ್ದಾರರು, ಇ.ಒ ತಾಲೂಕಾ ಪಂಚಾಯತ, ಮುಖ್ಯಾಧಿಕಾರಿ ಪಟ್ಟಣ ಪಂಚಾಯತ, ಎ.ಇ.ಇ ಹೆಸ್ಕಾಂ ಒಳಗೊಂಡಿರುವ ಸಮಿತಿ ರಚಿಸಿ, ಗಣೇಶನಿಗೆ ವಿಶೇಷ ಪೂಜೆ ಸೇವಾ ಕಾರ್ಯಕ್ರಮದ ಜೊತೆಗೆ ಅನ್ನ ಸಂತರ್ಪಣೆ ಮಾಡಿ, ತಾಲೂಕಿನ ಸಂಘ, ಸಂಸ್ಥೆ, ಜನ ಪ್ರತಿನಿಧಿಗಳ, ದಾನಿಗಳನ್ನು ಆಹ್ವಾನಿಸಿ ಸಾರ್ವಜನಿಕರ ವಿಶ್ವಾಸಗಳಿಸಿದ್ದರು.
ಹೊನ್ನಾವರದ ಹೊರತಾಗಿ ಅವರು ಕಾರ್ಯನಿರ್ವಹಿಸಿದ ಅಂಕೋಲಾ, ಯಲ್ಲಾಪುರ, ಜಮಖಂಡಿ, ಹಾನಗಲ್ ತಾಲೂಕಿನಲ್ಲಿಯೂ ಇದೆ ಮಾದರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಇದರ ಹೊರತಾಗಿ ರಾಷ್ಟ್ರೀಯ ಹಬ್ಬದ ದಿನಗಳಲ್ಲಿಯೂ ಕ್ವೀಜ್ ಇನ್ನಿತರ ಸ್ಪರ್ಧಾ ಕಾರ್ಯಕ್ರಮ ಆಯೋಜನೆ ಮಾಡಿ ಲಘು ಕಾರ್ಯಕ್ರಮದ ಜೊತೆಗೆ ವಿಶಿಷ್ಟವಾಗಿ ಆಚರಣೆ ಮಾಡಿ ಪೊಲೀಸ್ ಠಾಣೆಯನ್ನು ಜನಸ್ನೇಹಿ ಠಾಣೆಯನ್ನಾಗಿ ಮಾಡಿದ ಶ್ರೇಯಸ್ಸು ಶ್ರೀಧರ್ ಅವರಿಗೆ ಸಲ್ಲಿತ್ತು. ಶ್ರೀಧರ ರವರು ವರ್ಗಾವಣೆ ಆಗಿರಬಹುದು ಅವರು ಆಯೋಜನೆ ಮಾಡಿ ನೀಡಿರುವ ಬಹುಮಾನ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರಲ್ಲಿ ಇಂದಿಗೂ ಉಳಿದುಕೊಂಡಿದ್ದು, ಪ್ರತಿವರ್ಷ ಗಣೇಶ ಹಬ್ಬದ ಸಮಯದಲ್ಲಿ ಅವರನ್ನು ನೆನಪಿಸುತ್ತಿದೆ.