ಸಿದ್ದಾಪುರ: ರೈತರ ಅನುಕೂಲಕ್ಕಾಗಿ ಸ್ಥಾಪಿಸಲ್ಪಟ್ಟ ಬೇಡ್ಕಣಿ ವ್ಯವಸಾಯ ಸೇವಾ ಸಹಕಾರಿ ಸಂಘ ಇಂದು 48 ವರ್ಷಗಳನ್ನು ಪೂರೈಸಿ ಸದಸ್ಯರ ಬೆಂಬಲ ಮತ್ತು ಮಾರ್ಗದರ್ಶನದಿಂದ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. 2023 – 24ನೇ ಸಾಲಿನಲ್ಲಿ ಸಂಘವು 21.27 ಲಕ್ಷ ರೂ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಶಾಂತ್ ನಾಯ್ಕ ಕುಂಬ್ರಿಗದ್ದೆ ಹೇಳಿದರು.
ತಾಲ್ಲೂಕಿನ ಬೇಡ್ಕಣಿಯ ಕೋಟೆ ಆಂಜನೇಯ ದೇವಾಲಯದ ಸಭಾಭವನದಲ್ಲಿ ನಡೆದ ಸೇವಾ ಸಹಕಾರಿ ಸಂಘದ 48ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಬುಧವಾರ ಮಾತನಾಡಿದರು. ಚಿಕ್ಕದಾಗಿ ಆರಂಭಗೊಂಡ ಈ ಸಂಘ ಇಂದು 974 ಜನ ಸದಸ್ಯರನ್ನು ಹೊಂದಿದೆ. 1,57,27,250 ರೂ.ಷೇರು ಬಂಡವಾಳ ಹೊಂದಿದ್ದು ಈ ಬಾರಿ ಸದಸ್ಯರಿಗೆ ಶೇ. 8ರಷ್ಟು ಡಿವಿಡೆಂಡ್ ನೀಡಲಾಗಿದೆ. ಸಂಘದ ಆವರಣದಲ್ಲಿ ರೈತರ ಅನುಕೂಲಕ್ಕಾಗಿ ಕಟ್ಟಡ ಸಾಮಗ್ರಿ, ಸ್ಟೀಲ್ ಮತ್ತು ಸಿಮೆಂಟ್ ಮಾರಾಟವನ್ನು ಆರಂಭಿಸಲಾಗಿದೆ. ಕೃಷಿ ವಿಭಾಗದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೃಷಿ ಸಾಮಗ್ರಿಗಳ ಮಾರಾಟ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದಲ್ಲಿ ಸೇವೆ ಸಲ್ಲಿಸಿದ ಹಿಂದಿನ ಅಧ್ಯಕ್ಷರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ.ಕೆ.ಶಶಿಧರ ವರದಿ ವಾಚಿಸಿ ನಿರೂಪಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಬಾಬು ನಾಯ್ಕ ಕಡಕೇರಿ ಮತ್ತು ಸದಸ್ಯರು ಇದ್ದರು.