ಹೊನ್ನಾವರ: ಜಿಲ್ಲೆಯ ಏಕೈಕ ಬಿ.ಎಸ್.ಡಬ್ಲ್ಯೂ ಕಾಲೇಜನ್ನು ಅಕ್ರಮವಾಗಿ ಮುಚ್ಚುವ,ಸ್ಥಳಾಂತರಿಸುವ ಹುನ್ನಾರದ ವಿರುದ್ದ ವಿದ್ಯಾರ್ಥಿಗಳು ಸಿಡಿದೆದ್ದಿದ್ದು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಧಾರವಾಡ ವಿಶ್ವವಿದ್ಯಾಲಯ ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ದ ದೂರು ನೀಡಿದ್ದರು ತನಿಖೆ ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಏಕೈಕ ಸಮಾಜಕಾರ್ಯ ಪದವಿ ಕಾಲೇಜಾದ ಹೊನ್ನಾವರ ಅರೇಅಂಗಡಿಯ ಸಿರಿ ಬಿ.ಎಸ್.ಡಬ್ಲೂ. ಕಾಲೇಜ್, ಇದು ಕಳೆದ 13 ವರ್ಷಗಳಿಂದ ಅಧಿಕೃತವಾಗಿ ನಡೆದುಕೊಂಡು ಬಂದಿದೆ. ಮೊದಲ ಬ್ಯಾಚಿನಲ್ಲಿಯೇ ಧಾರವಾಡ ವಿಶ್ವವಿದ್ಯಾಲಯದಿಂದ ಸುವರ್ಣ ಪದಕಗಳಿಸಿದ ಈ ಕಾಲೇಜು ಹಲವು ಬಾರಿ ಚಿನ್ನದ ಪದಕ ಪಡೆದಿದೆ. ಉತ್ತಮ ಶಿಕ್ಷಣ ಮತ್ತು ಇನ್ನಿತರ ಚಟುವಟಿಕೆಗಳಿಂದ ಪ್ರೊಫೆಷನಲ್ ಕೋರ್ಸ್ ಆದ ಈ ಕಾಲೇಜು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ. ಜಿಲ್ಲೆಯ ವಿವಿಧ ಭಾಗದಿಂದ ನೂರಾರು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಕಲಿತು ಪದವಿ ಪಡೆದು ಉತ್ತಮ ಉದ್ಯೋಗಗಳನ್ನು ಪಡೆದು ಮತ್ತು ತಮ್ಮದೇ ಆದ ಎನ್‌ಜಿಒಗಳನ್ನು ಸ್ಥಾಪಿಸುವುದರೊಂದಿಗೆ ಅನೇಕರಿಗೆ ಉದ್ಯೋಗಗಳನ್ನು ನೀಡುವುದರ ಮೂಲಕ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪ್ರಶಂಸೆ ಗಳಿಸಿದ ಕಾಲೇಜು ಆಗಿತ್ತು. ಆದರೆ ಈಗ ಒಂದು ವರ್ಷದಿಂದೀಚೆಗೆ ಮುಚ್ಚುವ ಅಥವಾ ಸ್ಥಳಾಂತರಿಸುವ ಹುನ್ನಾರಕ್ಕೆ ಬಲಿಯಾಗುತ್ತಿದೆ. ಈ ಅಕ್ರಮ ಕೃತ್ಯ ಎಸಗಿದ ಆರೋಪಿಗಳು ಡಿಡಿ ಮೆಚನ್ನವರ್ ಚೇರ್‌ಮೆನ್ ಪಿ.ಜಿ.ಎಸ್.ಆಡಳಿತ ಮಂಡಳಿ ಗುರುನಾಥ್ ನಗರ ಹಳೆ ಹುಬ್ಬಳ್ಳಿ, ಲಕ್ಷ್ಮೀ ಡಿ. ಮೇಚನ್ನವರ್, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ನಿರ್ದೇಶಕರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಕುಲ ಸಚಿವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ,ಕುಲಪತಿಗಳು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಆಗಿದ್ದಾರೆ ಎಂದು ವಿದ್ಯಾರ್ಥಿಗಳು ಡಿಸಿಯವರಿಗೆ ನೀಡಿದ ಮನವಿಯಲ್ಲಿ ಆರೋಪಿಸಿದ್ದರು.
ಸಿರಿ ಬಿ.ಎಸ್.ಡಬ್ಲ್ಯೂ. ಕಾಲೇಜ್ ನ್ನು ಮುಚ್ಚುವ ಅಥವಾ ಸ್ಥಳಾಂತರಿಸುವ ಬಗ್ಗೆ ಸಾಕಷ್ಟು ಅಕ್ರಮ ನಡೆದಿದ್ದು, ಈ ಅಕ್ರಮ ವ್ಯವಹಾರಗಳ ಬಗೆ, ಸೂಕ್ತ ತನಿಖೆ ಅಥವಾ ಸಿಒಡಿ ತನಿಖೆ ಆಗಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದರು.
ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಅರುಣ ನಾಯ್ಕರವರು ಮಾತನಾಡಿ ಜಿಲ್ಲಾಧಿಕಾರಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಧಾರವಾಡ ವಿಶ್ವವಿದ್ಯಾಲಯದ ಕುರಿತು ವಿದ್ಯಾರ್ಥಿಗಳು ಲಿಖಿತ ದೂರು ನೀಡಿದ್ದಾರೆ. ಆದರೆ ಘಟನೆ ಕುರಿತಂತೆ ಧಾರವಾಡ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಕಾಲೇಜಿನ ಒರ್ವ ಪ್ರಾಂಶುಪಾಲರಿಂದ ಹೇಳಿಕೆ ಪಡೆಯಲು ಗ್ರಾಮಲೆಕ್ಕಾಧಿಕಾರಿಯು ಗ್ರಾಮಸಹಾಯಕನ ಮೂಲಕ ನಮಗೆ ಬರಲು ಹೇಳುತ್ತಾರೆ. ಜಿಲ್ಲಾಧಿಕಾರಿಗಳು ಪಡೆಯಬೇಕಾದ ಹೇಳಿಕೆಯನ್ನು ಒರ್ವ ಗ್ರಾಮಲೆಕ್ಕಾಧಿಕಾರಿ ಪೋನ್ ಮೂಲಕ ನಮಗೆ ಬರಹೇಳಲು ತಿಳಿಸುತ್ತಾರೆ.ಇದನ್ನೆಲ್ಲಾ ಗಮನಿಸಿದರೆ ಕಾಟಾಚಾರಕ್ಕೆಂಬಂತೆ ತನಿಖೆ ನಡೆಸುತ್ತಿದ್ದಾರೆ ಎನ್ನುವ ಅನುಮಾನ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅಸಮಧಾನ ತೊಡಗಿಕೊಂಡರು.