– ಸಂದೇಶ್ ಎಸ್.ಜೈನ್
ದಾಂಡೇಲಿ : ಪಕ್ಕಾ ಲೋಕಲ್ ಡಿಜೆ ಎಂದೆ ಕರೆಯಲ್ಪಡುವ ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಚೌತಿ ಸಂದರ್ಭದಲ್ಲಿ ನುಡಿಸಲಾಗುವ ಅನಾದಿಕಾಲದಿಂದ ಬಂದ ಸಂಸ್ಕಾರಯುತವಾದ ಕಲೆಗಳಲ್ಲಿ ಗುಮ್ಮಟೆ ಪಾಂಗ್ ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡು ಬಂದಿದೆ.
ವಿಶೇಷವಾಗಿ ಈ ಗುಮ್ಮಟೆ ಪಾಂಗ್ ಇದನ್ನು ಗಣೇಶ ಚತುರ್ಥಿಗೆ ನಾಮ ಸಂಕೀರ್ತನೆ, ಭಜನೆ, ಕೀರ್ತನೆ, ಪ್ರವಚನಗಳಲ್ಲಿ ನುಡಿಸಲಾಗುತ್ತದೆ. ಅಂಕೋಲಾ, ಕುಮಟಾ, ಕಾರವಾರದಲ್ಲಿ ಹೆಚ್ಚು ತನ್ನ ಪ್ರಭಾವವನ್ನು ಹೊಂದಿರುವ ಗುಮ್ಮಟೆ ಪಾಂಗ್ ದಾಂಡೇಲಿಯಲ್ಲಿಯೂ ಕೂಡ ಸದ್ದು ಮಾಡತೊಡಗಿದೆ. ನಗರದ ಕೋಮಾರಪಂಥ ಸಮಾಜ ಬಾಂಧವರ ಬಹುತೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗುಮ್ಮಟೆ ಪಾಂಗ್ ಸಹಜವಾಗಿ ಇರುತ್ತದೆ. ಅದು ಚೌತಿಯ ಸಂದರ್ಭದಲ್ಲಂತೂ ಕೋಮಾರಪಂತ ಸಮಾಜ ಬಾಂಧವರ ಮನೆಗಳಲ್ಲಿ ಶ್ರೀ ಗಣಪನ ಮುಂದೆ ಸಮಾಜ ಬಾಂಧವರು ಸೇರಿ ಗಣೇಶನ ನಾಮ ಸಂಕೀರ್ತನೆ, ಭಜನೆಗೆ ನುಡಿಸುತ್ತಾರೆ.
ಅಂದ ಹಾಗೆ ಹಳೆದಾಂಡೇಲಿಯ ಹಿರಿಯ ಜೀವ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕರಾದ ಸದಾನಂದ ನಾಯ್ಕ ಅವರ ಮನೆಯಲ್ಲಿ ಶ್ರೀ ಗಣೇಶನನ್ನು ಪ್ರತಿಷ್ಠಾಪಿಸಲಾಗಿ ಪೂಜೆ ಭಜನೆಗಳನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಗುಮ್ಮಟೆ ಪಾಂಗ್ ನ್ನು ನುಡಿಸಲಾಯಿತು. ಅದರಲ್ಲಿಯೂ ವಿಶೇಷವಾಗಿ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಹಾಗೂ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಕಲಿಸುವ ಒಂದು ಪ್ರಯತ್ನವನ್ನು ಇಲ್ಲಿ ಮಾಡಲಾಗಿರುವುದು ನಿಜಕ್ಕೂ ಶ್ಲಾಘನೀಯ. ದೊಡ್ಡವರು ಎಳೆಯ ಮಕ್ಕಳ ಕೈಯಲ್ಲಿ ಗುಮ್ಮಟೆ ಪಾಂಗ್ ಕೊಟ್ಟು ಅವರ ಮೂಲಕವು ನುಡಿಸಿ ಈ ಪರಂಪರೆಯನ್ನು ಮುಂದಿನ ತಲೆಮಾರಿಗೂ ಹಸ್ತಾಂತರಿಸುವ ಕಾರ್ಯಕ್ಕೆ ಮುಂದಾಗಿರುವುದು ಅಭಿನಂದನೀಯ ಮತ್ತು ಅನುಕರಣೀಯ.
ಸದಾನಂದ ನಾಯ್ಕ ಅವರ ಮನೆಯಲ್ಲಿ ನಡೆದ ಗುಮ್ಮಟೆ ಭಜನೆಯಲ್ಲಿ ಸುಮತಿ ನಾಯ್ಕ, ಎಂ.ಎಸ್.ನಾಯ್ಕ, ರಮಾ ನಾಯ್ಕ, ಶಿವಾನಂದ ನಾಯ್ಕ, ಮಾಯ ನಾಯ್ಕ, ರಾಮದಾಸ ನಾಯ್ಕ, ವಂದನಾ ನಾಯ್ಕ, ಗಣಪತಿ ನಾಯ್ಕ, ರಾಘವೇಂದ್ರ ನಾಯ್ಕ, ಶಾಂತೇಶ ನಾಯ್ಕ, ಪ್ರವೀಣ್ ನಾಯ್ಕ, ವಿಶಾಲ್ ನಾಯ್ಕ, ರೋಹನ ನಾಯ್ಕ, ಸೂರಜ್ ನಾಯ್ಕ, ಸಹನಾ ನಾಯ್ಕ, ಶೀಲಾ ನಾಯ್ಕ, ಶೀತಲ ನಾಯ್ಕ ಮೊದಲಾದವರು ಭಾಗವಹಿಸಿದ್ದರೇ, ಇತ್ತ ಮಕ್ಕಳಾದ ದರ್ಶನ ಗಣಪತಿ ನಾಯ್ಕ, ಆದಿತ್ಯ ಪ್ರವೀಣ್ ನಾಯ್ಕ, ನಿಖಿಲ್ ಶಾಂತೇಶ ನಾಯ್ಕ, ಶಾನ್ವಿ ರಾಘವೇಂದ್ರ ನಾಯ್ಕ, ಅಮಿತ್ ರಾಮದಾಸ ನಾಯ್ಕ, ಓಂಕಾರ್ ರಾಮದಾಸ ನಾಯ್ಕ, ಸ್ನೃತಿ ಶಾಂತೇಶ ನಾಯ್ಕ, ಸುಯೋಗ್ ಜೈನ್, ಮೌಲ್ಯ ಜೈನ್ ಸಹ ಉತ್ಸಾಹದಿಂದ ಭಾಗವಹಿಸಿ, ಗುಮ್ಮಟೆ ಪಾಂಗ್ ಕಲೆಗೆ ನಿಜವಾದ ಗೌರವ ಸಲ್ಲಿಸಿದ್ದಾರೆ.
ನಮ್ಮ ಕಲೆ, ಸಂಸ್ಕೃತಿ, ಸಂಸ್ಕಾರ, ಆಚಾರ -ವಿಚಾರ ಸದಾ ಜೀವಂತವಾಗಿರಬೇಕಾದರೆ ಅದನ್ನು ನಾವು ನಮ್ಮ ಮಕ್ಕಳಿಗೆ ಕಲಿಸಿದಾಗ ಮಾತ್ರ ಸಾಧ್ಯ ಎನ್ನುವುದನ್ನು ನಾವೆಲ್ಲ ಅರಿತು ನಡೆದುಕೊಳ್ಳಬೇಕಾಗಿದೆ.