ಪರಿಸರ ಸ್ನೇಹಿ ಗಣಪನ ತಯಾರಿಕೆಗೆ ಬೆನ್ನೆಲುಬಾಗಿ ನಿಂತಿದೆ ವಿನಾಯಕನ ಕುಟುಂಬ
ಶಿರಸಿ: ಸೋಂದಾ ಸ್ವರ್ಣವಲ್ಲಿ ಮಠ ಉಂಟಲ್ಲ.. ಅಲ್ಲೊಬ್ಬ ಗುಡಿಗಾರ ಬಾಳ ಚಲೋ ಗಣಪ ಮೂರ್ತಿ ತಯಾರಿಸಿದ್ದಾರೆ.ಅವ್ನ ಪೇಂಟಿಂಗ್, ಮೂರ್ತಿಯ ಡಿಸೈನ್, ಮನಸ್ಸಿಗೆ ಒಪ್ಪುವ ಆಕಾರದಲ್ಲಿ ಗಣಪತಿ ಮೂರ್ತಿ ತಯಾರು ಮಾಡಿದ್ದಾರೆ ಎಂಬ ಮಾತು ಕೇಳಿದಾಗ ಸಹಜವಾಗಿ ಆಶ್ಚರ್ಯ ಆಗಿತ್ತು.
“ಚೌತಿ ಹಬ್ಬ” ಬಂದಾಗೆಲ್ಲ ಮಣ್ಣಿನಿಂದ ಸಿದ್ದ ಮಾಡುವ ಗಣಪತಿಗೆ ಬಹು ಬೇಡಿಕೆ! ಕೈಯಿಂದ ಗಣಪತಿ ಸಿದ್ದ ಮಾಡುವ ಗುಡಿಗಾರಿಗೂ ಬಿಡುವಿಲ್ಲದ ಕೆಲಸ. ಸಾಮಾನ್ಯವಾಗಿ ಚೌತಿ ಹಬ್ಬದ ವೇಳೆಯಲ್ಲಿ ಈ ಗಣಪತಿ ಮೂರ್ತಿ ಮಾಡುವ ಗುಡಿಗಾರನ್ನು ಆಯಾ ಭಾಗದ ಜನರು, ಅಭಿಮಾನಿಗಳು ಸಹಜವಾಗಿ ಮೂರ್ತಿ ಸಿದ್ದ ಮಾಡುವ ಗುಡಿಗಾರರನ್ನು ಅಭಿಮಾನದಿಂದ ಕಾಣುತ್ತಾರೆ.ಉಳಿದ ದಿನದಲ್ಲಿ ಆ ಗುಡಿಗಾರರನ್ನು ಕಣ್ಣೆತ್ತಿಯೂ ನೋಡದವರು ಇದ್ದಾರೆ.
ಈ ಸುಧಾರಣೆಯ ಕಾಲ ಘಟ್ಟದಲ್ಲಿ ನಮ್ಮ ಮನೆಯ/ ನಮ್ಮೂರಿನ ಗಣಪತಿಯ ಸಿದ್ದ ಮಾಡುವ ಗುಡಿಗಾರ ಏನ್ನುವ ಆತ್ಮೀಯತೆ ಬಹುತೇಕರಿಗೆ ಇರುವುದೇ ಇಲ್ಲ. ಇನ್ನು ಕೆಲವರು ವರುಷಕ್ಕೊಮ್ಮೆ ಮೂರ್ತಿ ಮಾಡಿಕೊಡುವ ಗುಡಿಗಾರನಾದರೂ ಅವನು ಕಂಡಾಕ್ಷಣ ಪ್ರೀತಿಯಿಂದ ಮಾತಾಡುವುದೋ ,ರಾಜ ಉಪಚಾರ ಮಾಡುವವರು ಈ ದಿನದಲ್ಲಿಯೂ ಇದ್ದಾರೆ. ಇವುಗಳ ಪೈಕಿ ಸ್ವರ್ಣವಲ್ಲಿ ಮಠದ ವಿನಾಯಕ ಗುಡಿಗಾರ ಸಹಾ ಎರಡನೆ ಸಾಲಿಗೆ ಸೇರಿದ ಗುಡಿಗಾರ ಎಂದರೂ ಅತಿಶಯೋಕ್ತಿ ಆಗಲಾರದು.
ಶಿರಸಿ ತಾಲೂಕಿನ ಸೋಂದಾ – ಸ್ವರ್ಣವಲ್ಲಿಯ ನಿವಾಸಿಯಾದ ವಿನಾಯಕ ಮಂಜುನಾಥ ಗುಡಿಗಾರನದು ಗುಡಿ ಕೈಗಾರಿಕೆಯೇ ಮೂಲ ಕಸುಬು.ಇವರ ತಂದೆ ಆ ದಿನದಲ್ಲಿ ಸುಮಾರು 40 ಗಣಪತಿ ಮೂರ್ತಿಯನ್ನು ಸಿದ್ದ ಮಾಡುತ್ತಿದ್ದರು. ಈಗೀನಷ್ಟು ಯಂತ್ರೋಪಕರ,ಸುಧಾರಿತ ವಿಧಾನ ಇಲ್ಲದಿದ್ದರೂ ಎರಡು – ಮೂರು ದಿನಕ್ಕೊಂದು ಮಣ್ಣಿನ ಗಣಪ ಸಿದ್ದ ಮಾಡುವಷ್ಟು ಸಾಮರ್ಥ್ಯ ಅವರಲ್ಲಿತ್ತು.ಅವರು ಮೂರ್ತಿ ಮಾಡುವುದನ್ನು ಸೂಕ್ಷ್ಮವಾಗಿ ಗ್ರಹಿಸಿದ ಬಾಲಕ ವಿನಾಯಕನಿಗೆ, ತನಗೂ ಮೂರ್ತಿ ಸಿದ್ದ ಮಾಡಬೇಕೆಂಬ ಹೆಬ್ಬಯಕೆ ಮನದಲ್ಲಿ ಹೆಪ್ಪುಗಟ್ಟಿತು. ಅವರ ಕೈಚಳಕದ ಕಲಾಪ್ರೌಢಿಮೆಯ ಪ್ರಭಾವ ವಿನಾಯಕನ ಮೇಲೆ ಬೀರಿದ ಪರಿಣಾಮ ,ಇವರಲ್ಲಿ ಮಣ್ಣಿನ ಮೂರ್ತಿ ಸಿದ್ಧ ಮಾಡುವ ಕಲೆ ಪ್ರೇರಣೆಯಾಗಿ ಒದಗಿತು.ಆಮೇಲೆ ಸ್ವತಂತ್ರವಾಗಿ ಮೂರ್ತಿ ತಯಾರಿಸಲು ಆರಂಭ ಮಾಡಿದ ವಿನಾಯಕ ಗುಡಿಗಾರ ಹಿರಿಯರಿಂದ ಶಬ್ಬಾಷ್ ಎಂಬ ಮೆಚ್ಚುಗೆ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಮೇ ಯಿಂದಲೇ ಕೆಲಸ ಆರಂಭ!
ಸ್ವರ್ಣವಲ್ಲಿಯ ವಿನಾಯಕ ಮಂಜುನಾಥ ಗುಡಿಗಾರರು ಜೇಡಿ ಮಣ್ಣಿನಿಂದ ಮೂರ್ತಿ ಮಾಡುವ ಕೆಲಸ ಮೇ ತಿಂಗಳಿನಿಂದ ಆರಂಭ ಮಾಡುತ್ತಾರೆ. ಸಿದ್ದಾಪುರ ತಾಲೂಕಿನ ಹೆಗ್ಗರಣಿಯಿಂದ ಒಂದು ಟಿಪ್ಪರ್‌ನಷ್ಟು ಮಣ್ಣನ್ನು ( 20 ಸಾವಿರ ರೂ.) ತಂದು ಸಂಗ್ರಹ ಮಾಡಿಕೊಳ್ಳುತ್ತಾರೆ. ಮೊದಲೆಲ್ಲ ಆ ಮಣ್ಣನ್ನು ಹದಾ ಮಾಡಿಕೊಳ್ಳಲು ಬಹಳ ದಿನ ಬೇಕಾಗುತಿತ್ತು. ಆದರೆ ಕಳೆದ ಸೀಜನ್ನಿನಲ್ಲಿ ಮಣ್ಣನ್ನು ಹದಾ ಮಾಡಿಕೊಳ್ಳಲು ಹೊಸ ಯಂತ್ರವನ್ನು ಹಾಕಿಕೊಂಡಿದ್ದೇನೆ. ಈಗ ಕೆಲವೇ ಸಮಯದಲ್ಲಿ ಬೇಕಾಗುವಷ್ಟು ಮಣ್ಣನ್ನು ಹದಾ ಮಾಡಿಕೊಳ್ಳಲು ಸಹಕಾರಿಯಾಗಿದೆ.ಕೆಲಸವೂ ಬೇಗ ಸಾಗುತ್ತದೆ, ಮಣ್ಣು ನಮಗೆ ಬೇಕಾದ ಹದದಲ್ಲಿ ಸಿದ್ದ ಮಾಡಿಕೊಳ್ಳಲು ಈ ಮಷಿನ್ ಬಹಳ ಉಪಯೋಗ ಆಗಿದೆ ಎನ್ನುತ್ತಾರೆ ವಿನಾಯಕ ಗುಡಿಗಾರ.
ಕಳೆದ ಸುಮಾರು 45 ವರುಷದಿಂದ ಮಣ್ಣಿನ ಗಣಪನ ಮೂರ್ತಿ ಸಿದ್ದಪಡಿಸಲು ತೊಡಗಿಸಿ ಕೊಂಡಿರುವ ವಿನಾಯಕ ಗುಡಿಗಾರ, ಸಾರ್ವಜನಿಕ ಹಾಗೂ ಮನೆಯಲ್ಲಿ ಕೂರಿಸುವ ಗಣಪತಿಯನ್ನು ಆಕರ್ಷಕವಾಗಿ ಮಾಡುವುದರಲ್ಲಿ ಸಿದ್ಧಹಸ್ತರು. ಈ ವರುಷ 225ಕ್ಕು ಹೆಚ್ಚು ಗಣಪನ ಮೂರ್ತಿ ಮಾಡಿರುವ ಇವರಿಗೆ, ಇಡೀ ಕುಟುಂಬವೇ ಬೆನ್ನೆಲುಬಾಗಿ ನಿಂತಿದೆ. ಹಿಂದೆಲ್ಲ ದೊಡ್ಡ ಮಗಳು ರಕ್ಷಾ ನನ್ನ ಬಹು ಕೆಲಸಕ್ಕೆ ಸಹಾಯ ಮಾಡುತ್ತಿದ್ದಳು. ಅವಳಿಗೆ ಮದುವೆ ಆದ ಕಾರಣ, ಈಗ ಅವಳ ಜವಾಬ್ದಾರಿ ಕಿರಿ ಮಗಳು ಪೂರ್ಣಿಮಾ ತುಂಬಿದ್ದಾಳೆ. ಆಕೆ ಉದ್ಯೋಗ ಮಾಡುತ್ತಿದ್ದರೂ ಸಹ ಹಲವಾರು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾ ಇರುವುದರಿಂದ , ನನಗೆ ಅನುಕೂಲ ಆಗಿದೆ ಎನ್ನುತ್ತಾರೆ ವಿನಾಯಕ. ಮಗ ಶೈಲೇಶ್ ಉದ್ಯೋಗ ಮಾಡ್ತಾ ಇದ್ದರೂ ಸಹಾ ಹಬ್ಬ ಶುರುವಾಗುವ ಮೊದಲೆ ಬಂದು, ಮೂರ್ತಿಗೆ ಅಂದವಾಗಿ ಪೇಟಿಂಗ್ ಮಾಡ್ತಾನೆ.ಅದು ಸೂಕ್ಷ್ಮವಾದ ಕೆಲಸ ಆಗಿದ್ದು, ಯಂತ್ರ ತಂದುಕೊಂಡಿದ್ದರಿಂದ ಆತ ಅದ್ರ ಮೂಲಕ ಕೆಲಸ ಮಾಡಿ ನನ್ನ ಕೆಲಸವನ್ನು ಹಗುರ ಮಾಡಿಕೊಡುತ್ತಾನೆ.ಇನ್ನು ಪತ್ನಿ ಸುಜಾತ ಸಹ ಮನೆ ಕೆಲಸಗಳನ್ನು ಪೂರೈಸಿಕೊಂಡು ಮೂರ್ತಿಗೆ ಬೇಕಾಗುವ ಅಲಂಕಾರಿಕ ವಸ್ತುಗಳೆಲ್ಲ ಸಿದ್ದ ಮಾಡಿಕೊಳ್ತಾಳೆ. ಇನ್ನು ಕೆಲ ಆತ್ಮೀಯರು ಸಹಾಯಕರು ತಮ್ಮದೇ ಆದ ಸಹಾಯ, ಪ್ರೋತ್ಸಾಹ ಮಾಡುತ್ತಿದ್ದಾರೆ. ಸಕಾಲದಲ್ಲಿ ಅವರೆಲ್ಲ ಸಹಾಯ, ಸಹಕಾರ ಇರುವುದರಿಂದಲೇ ನಾನು ಪ್ರತಿ ವರುಷವೂ ಜೇಡಿ ಮಣ್ಣಿನಿಂದ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಮೂರ್ತಿ ತಯಾರು ಮಾಡಲು ಸಾಧ್ಯವಾಗಿದೆ ಎಂದು ವಿನಾಯಕ ಗುಡಿಗಾರ ಆತ್ಮವಿಶ್ವಾಸದಿಂದ ಹೇಳುತ್ತಾರೆ.
ವಿಭಿನ್ನ ಆಕಾರದ ಮೂರ್ತಿಗಳು:
ವಿನಾಯಕ ಗುಡಿಗಾರಲ್ಲಿ ಕೇವಲ ಒಂದೆ ಬಣ್ಣ, ಒಂದೇ ವಿಧದ ಗಣಪನ ಮೂರ್ತಿಗಳಿಲ್ಲ. ಅವರು ಜನರ ಅಪೇಕ್ಷೇಯ ಮೇರೆಗೆ, ಅವರು ಇಷ್ಟಪಟ್ಟ ಆಕಾರ, ಗಾತ್ರ- ವಿನ್ಯಾಸ ಬಣ್ಣದಲ್ಲಿ ಗಣಪತಿ ಮೂರ್ತಿಯನ್ನು ಸಿದ್ದ ಮಾಡ್ತಾರೆ.ಕೆಲವರು ಗೂಡಿನ (ಮಂಟಪ) ಅಳತೆ ಕೊಟ್ಟು ಹೋಗ್ತಾರೆ. ಆ ಅಳತೆಗೆ ತಕ್ಕ ಮೂರ್ತಿಯನ್ನು ತಯಾರಿಸಬೇಕು.ಗ್ರಾಹಕರ ಅಪೇಕ್ಷೆ , ಬೇಡಿಕೆಯ ಅನುಸಾರ ಕೆಲಸ ಮಾಡಿಕೊಡುವುದು ಅನಿವಾರ್ಯ. ಧಾರ್ಮಿಕ ಭಾವನೆಯಿಂದ ಶ್ರದ್ದೆ, ಭಕ್ತಿಯಿಂದ ಪೂಜೆ ಮಾಡಲ್ಪಡುವ ಮೂರ್ತಿಯನ್ನು ಮಾಡುವುದು, ಅತೀ ಸರಳ – ಸುಲಭದ ಕೆಲಸವೇನು ಅಲ್ಲ. ಜನರ ಬಾವನೆಯನ್ನು ಅರ್ಥ ಮಾಡಿಕೊಂಡು, ಅವರು ಹೇಳಿದ ವಿನ್ಯಾಸದಲ್ಲಿ ಮೂರ್ತಿ ಸಿದ್ದ ಮಾಡುವುದು ಸವಾಲಿನ ಕೆಲಸ. ಅವರಿಷ್ಟದಂತೆ ಮೂರ್ತಿ ಸಿದ್ದ ಮಾಡಿ ಅವರ ಪ್ರೀತಿ – ವಿಶ್ವಾಸ ಗಳಿಸಿಕೊಂಡು ಹೋಗುವುದೇ ಹಗ್ಗದ ಮೇಲಿನ ನಡಿಗೆ ಎನ್ನುತ್ತಾರೆ ವಿನಾಯಕ ಗುಡಿಗಾರ.ಅವರು ಯಕ್ಷ ಕಿರೀಟದ ಗಣಪ, ಪೇಟ ಗಣಪ, ಬಾಲ ಗಣಪ, ಸಿಂಹಾಸನ ಗಣಪ, ಚಕ್ರ ಗಣಪ, ಹುತ್ತದ ಮೇಲೆ ಕುಳಿತ ಗಣಪ….ಹೀಗೆ ಬೇರೆ ಬೇರೆ ವಿನ್ಯಾಸದ ವೈವಿದ್ಯಮಯವಾದ ಗಣಪತಿ ಮೂರ್ತಿಯನ್ನು ತನ್ನ ಕೈಚಳಕದಲ್ಲಿ ಸಿದ್ದ ಮಾಡಿದ್ದಾರೆ. ಈ ಗುಡಿಗಾರರು ಸಿದ್ದ ಮಾಡಿದ ಮೂರ್ತಿಗಳು ಶಿರಸಿ, ಯಲ್ಲಾಪುರ ತಾಲೂಕಿನ ಹಲವಾರು ಹಳ್ಳಿಗಳಿಗೆ ಹೋಗುತ್ತಿದ್ದು, ವರುಷದಿಂದ ವರುಷಕ್ಕೆ ಮೂರ್ತಿಯನ್ನು ಒಯ್ಯುವವರ ಸಂಖ್ಯೆ ಸಹಾ ಹೆಚ್ಚಾಗುತ್ತಿದೆ ಎಂದು ವಿನಾಯಕ ಗುಡಿಗಾರ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.
ಪರಿಸರ ಸ್ನೇಹಿ ಗಣಪ!
ಸ್ವರ್ಣವಲ್ಲಿಯ ವಿನಾಯಕ ಗುಡಿಗಾರ ಹಿಂದೊಮ್ಮೆ ಸ್ಥಳೀಯ ಸಂಸ್ಥೆಯೊಂದರ ಸಹಕಾರದಲ್ಲಿ ಪರಿಸರ ಸ್ನೇಹಿಯಾದ ಗಣಪನ ತಯಾರಿಸಿದ್ದರು. ಯಾವುದೇ ಕೆಮಿಕ್ಸಲ್ ಬಳಸದೇ, ಕೆಮ್ಮಣ್ಣು, ಅರಿಶಿಣ….ಇಂಥಹ ನೈರ್ಸಗಿಕ ಬಣ್ಣವನ್ನು ಮಾತ್ರ ಉಪಯೋಗಿಸಿಕೊಂಡು ,ಮಣ್ಣಿನಿಂದ ಮೂರ್ತಿ ರಚನೆಯಲ್ಲಿಯೂ ಸಹಾ ತಮ್ಮನ್ನು ತೊಡಗಿಸಿಕೊಂಡಿದ್ದರು. ಸುಮಾರು ಹತ್ತು ವರುಷಗಳ ಕಾಲ ಆ ವಿಶಿಷ್ಟವಾದ, ಘನ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿ ಕೊಂಡಿದ್ದ ಇವರು ಸಿದ್ದ ಮಾಡಿದ ಮೂರ್ತಿಗಳು ಜಿಲ್ಲೆ,ರಾಜ್ಯದ ಗಡಿದಾಟಿ ಮುಂಬೈ, ಪುಣಾ….ಇಂಥಹ ಮಹಾನಗರಿಗೆ ಹೋಗಿ ಪೂಜಿಸ್ಪಟ್ಟಿತ್ತು.ಇದು ವಿನಾಯಕ ಗುಡಿಗಾರನ ಕೈಚಳಕದ ಕಲಾಪ್ರವೃತ್ತಿಗೆ ಸಂದ ಗೌರವ ಎಂದರೂ ಅತೀಶಯೊಕ್ತಿ ಆಗಲಾರದು.
ಮುಂದುವರೆಸುವುದೇ ಕಷ್ಟ…!
ನನಗೀಗ 67 ವರುಷ. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ವರುಷದಿಂದ ಚೌತಿ ಹಬ್ಬದ ಸಮಯದಲ್ಲಿ ಮಣ್ಣಿನ ಮೂರ್ತಿ ಸಿದ್ದ ಮಾಡುವುದು, ಇನ್ನುಳಿದ ದಿನದಲ್ಲಿ ಪೇಟಿಂಗ್, ಕರಕುಶಲ ಕಲೆ,ಹೊಸ್ತಿಲ ಬಾಗಿಲಿಗೆ ಬಳ್ಳಿ ಚಿತ್ತಾರ…ಹೀಗೆ ವಿಭಿನ್ನವಾದ ಕೆಲಸಗಳಲ್ಲಿ ತೊಡಗಿಕೊಂಡು, ಕುಟುಂಬವನ್ನು ತೃಪ್ತಿಯಿಂದ ಮುನ್ನಡೆಸಿಕೊಂಡು ಬಂದಿದ್ದೇನೆ. ಸಿಕ್ಕಿದ ಆದಾಯದಲ್ಲಿಯೇ ಮಕ್ಕಳನ್ನು ಓದಿಸಿದ್ದೇನೆ. ಅವರೀಗ ಸ್ವತಂತ್ರವಾಗಿ ದುಡಿಯಲು ಆರಂಭ ಮಾಡಿದ್ದಾರೆ.ಇನ್ನು ನಾಲ್ಕಾರು ವರುಷ ಈ ಕೆಲಸವನ್ನು ಉತ್ಸಾಹದಿಂದ ಮಾಡಬಹುದು.ಮುಂದಿನ ದಿನದಲ್ಲಿ ಈ ಮೂರ್ತಿ ಸಿದ್ದ ಮಾಡುವ ಕಸುಬನ್ನು ನಾನಲ್ಲ, ನನ್ನ ಕುಟುಂಬದವರು ಮುಂದುವರೆಸಿಕೊಂಡು ಹೋಗುವುದು ಬಹಳ ಕಷ್ಟ ಎನ್ನುತ್ತಾರೆ ಸ್ವರ್ಣವಲ್ಲಿಯ ವಿನಾಯಕ ಗುಡಿಗಾರ.
- ಗಣಪತಿ ಹಾಸ್ಪುರ
ಚವತ್ತಿ,
ಯಲ್ಲಾಪುರ ಉ.ಕ.ಜಿಲ್ಲೆ