Slide
Slide
Slide
previous arrow
next arrow

ಈ ಬಾರಿ ಶಿರಸಿಯಲ್ಲಿ ಕನ್ನಡ ಕಲರವ : ನವೆಂಬರ್‌ನಲ್ಲಿ ಜಿಲ್ಲಾ ಸಾಹಿತ್ಯ ಜಾತ್ರೆ

300x250 AD

ದಾಂಡೇಲಿ: ಉತ್ತರ ಕನ್ನಡ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ ಮೊದಲ ವಾರದಲ್ಲಿ ಶಿರಸಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆ ತಿಳಿಸಿದ್ದಾರೆ.

ಈ ಬಗ್ಗೆ ಅವರು ಮಾಧ್ಯಮಕ್ಕೆ ಮಾಹಿತಿಯನ್ನು‌ ನೀಡಿದ್ದಾರೆ. ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಶಿರಸಿ, ಸಿದ್ದಾಪುರ, ಮುಂಡಗೋಡ ತಾಲೂಕಿನ ಕಸಾಪ ಅಧ್ಯಕ್ಷರು ತಮ್ಮ ತಮ್ಮ ತಾಲೂಕಿನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆತಿಥ್ಯ ನೀಡುವಂತೆ ಮನವಿ ಮಾಡಿದ್ದರು. ಸಭೆಯಲ್ಲಿ ಚರ್ಚೆ ನಡೆದು ಅಂತಿಮವಾಗಿ  ಶಿರಸಿ ತಾಲೂಕಿನಲ್ಲಿ  ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡದ ಮೊದಲ ರಾಜಧಾನಿ ಎಂಬ ಹಿರಿಮೆಯಿರುವ ಐತಿಹಾಸಿಕ ಬನವಾಸಿಯನ್ನು  ಒಳಗೊಂಡಿರುವ ಶಿರಸಿ  ತಾಲೂಕು ಸಾಂಸ್ಕೃತಿಕ ನಗರಿ ಕೂಡಾ.  ತನ್ನದೇ ಆದ ಸಾಮಾಜಿಕ, ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ವೈಶಿಷ್ಠ್ಯತೆಗಳನ್ನು ಹೊಂದಿರುವ ಶಿರಸಿಯಲ್ಲಿ ಸುಮಾರು 25  ವರ್ಷಗಳ ನಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. 1999ರಲ್ಲಿ ಜನಪದ ವಿದ್ವಾಂಸ ಡಾ.ಎಲ್.ಆರ್.ಹೆಗಡೆಯವರ ಸರ್ವಾಧ್ಯಕ್ಷತೆಯಲ್ಲಿ  ಶಿರಸಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿತ್ತೆಂಬ ಮಾಹಿತಿಯಿದ್ದು, ಅದಕ್ಕೂ ಫೂರ್ವ  1982ರಲ್ಲಿ  ಗೋರೂರು ರಾಮಸ್ವಾಮಿ ಅಯ್ಯಂಗರ್ ಸರ್ವಾಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ  ಶಿರಸಿಯಲ್ಲಿ  ನಡೆದಿತ್ತು.

ಇದೀಗ  ಶಿರಸಿಯಲ್ಲಿ 24 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ನಡೆಸಲು ಜಿಲ್ಲಾ  ಕಾರ್ಯಕಾರಿ ಸಭೆಯಲ್ಲಿ  ನಿರ್ಧರಿಸಲಾಗಿದ್ದು, ಶಿರಸಿಯಲ್ಲಿ ತಾಲೂಕು ಕಸಾಪ ಕಾರ್ಯಕಾರಿ ಸಮಿತಿಯ ಸಭೆ  ಹಾಗೂ ಸ್ವಾಗತ ಸಮಿತಿ ಸಭೆ ನಡೆಸಿ,  ಸ್ಥಳೀಯ ಸಾಹಿತಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿದ ನಂತರದಲ್ಲಿ ನವೆಂಬರ್ ಮೊದಲ ವಾರದಲ್ಲಿ ಸಮ್ಮೇಳನ ನಡೆಸಲು ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

300x250 AD

ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಪಿ.ಆರ್. ನಾಯ್ಕ,  ಜಾರ್ಜ್ ಫರ್ನಾಂಡಿಸ್, ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಆನೆಹೊಸೂರ,  ಕಸಾಪ ತಾಲೂಕು ಘಟಕದ ಅಧ್ಯಕ್ಷರಾದ ಹಳಿಯಾಳದ ಸುಮಂಗಲ ಅಂಗಡಿ,  ಶಿರಸಿಯ ಜಿ. ಸುಬ್ರಾಯ ಭಟ್, ಬಕ್ಕಳ, ಸಿದ್ದಾಪುರದ ಗೋಪಾಲ ನಾಯ್ಕ್ , ಮುಂಡಗೋಡದ ವಸಂತ ಕೊಣಸಾಲಿ, ಯಲ್ಲಾಪುರದ ಸುಬ್ರಹ್ಮಣ್ಯ ಭಟ್, ದಾಂಡೇಲಿಯ ನಾರಾಯಣ ನಾಯ್ಕ, ಜೋಯಿಡಾದ  ಪಾಂಡುರಂಗ ಪಟಗಾರ,  ಕಾರವಾರದ ರಾಮಾ ನಾಯ್ಕ,  ಅಂಕೋಲಾದ ಗೋಪಾಲಕೃಷ್ಣ ನಾಯಕ,  ಕುಮಟಾದ ಸುಬ್ಬಯ್ಯ ನಾಯ್ಕ, ಹೊನ್ನಾವರದ ಎಸ್.ಎಚ್. ಗೌಡ, ಜಿಲ್ಲಾ ಪ್ರತಿನಿಧಿಗಳಾದ ಎಸ್. ಜಿ. ಬಿರಾದರ್, ಜಯಶೀಲ ಆಗೇರ,  ಪಿ.ಎಮ್. ತಾಂಡೇಲ, ಸೀತಾ ದಾನಗೇರಿ ಮುಂತಾದವರು ಉಪಸ್ಥಿತರಿದ್ದರು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top