ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಹಾಲಿ ಸಂಸದರಿಗೆ ಸನ್ಮಾನ | ಸಹಕಾರಿ ಸಂಘ, ಸದಸ್ಯರಿಗೆ ಗೌರವ
ಶಿರಸಿ: ಮಹಸೂಲುಗಳನ್ನು ದಾಸ್ತಾನಿಡಲು ಗೋಡೌನ್‌ಗಳಲ್ಲಿ ಜಾಗದ ಕೊರತೆಯಾಗುತ್ತಿದ್ದು ರೈತ ಸದಸ್ಯರು ದಾಸ್ತಾನು ಮಾಡಿಡುವ ಬೆಳೆಗಳನ್ನು ವರ್ಷದೊಳಗಾದರೂ ಮಾರಾಟಕ್ಕೆ ತೆಗೆದು ಅನುಕೂಲ ಮಾಡಬೇಕು ಎಂದು ಟಿಎಂಎಸ್ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟೀಸರ ಸಲಹೆ ನೀಡಿದರು.
ಶನಿವಾರ ನಡೆದ ಟಿಎಂಎಸ್‌ನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ರೈತರು ತಾವು ದಾಸ್ತಾನಿಟ್ಟ ಬೆಳೆ ಇನ್ನೊಂದು ಬೆಳೆ ಬರುವದೊರೊಳಗೆ ವಿಕ್ರಿ ಮಾಡಬೇಕು. ಕೆಲವರು ಎರಡು ವರ್ಷವಾದರೂ ಹಾಗೇ ಇಡುತ್ತಾರೆ. ಇದರಿಂದ ಜಾಗದ ಲಭ್ಯತೆ ಇಲ್ಲದಾಗುತ್ತದೆ. ವರ್ಷದೊಳಗೆ ಮಾರಾಟ ಮಾಡುವುದರಿಂದ ಆರ್ಥಿಕ ದೃಷ್ಟಿಯಿಂದಲೂ ಸಂಸ್ಥೆಗೆ ಹಾಗೂ ರೈತರಿಗೆ ಅನುಕೂಲ ಎಂದರು. ರೈತರು ಬೆಳೆದ ಬೆಳೆ ಬೆಲೆ ಬಂದಾಗ ಕೊಡಲು ಅನುಕೂಲವಾಗಲು ಸಂಸ್ಥೆ ೨೦ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ಈವರೆಗೆ ಗೋಡೌನ್ ನಿರ್ಮಿಸಿದೆ. ಇಷ್ಟಾದರೂ ಇನ್ನು ಒಂದೆರಡು ಸಾವಿರ ಕ್ವಿಂಟಲ್ ಅಡಕೆ ದಾಸ್ತಾನಿಗೆ ಬಂದರೆ ಜಾಗ ಇಲ್ಲದ ಸ್ಥಿತಿಯಿದೆ. ಸುರಕ್ಷತೆ ದೃಷ್ಟಿಯಿಂದ ಭವಿಷ್ಯದಲ್ಲಿ ರೈತರು ಮನೆಯಲ್ಲಿಯೇ ಬೆಳೆ ಇಟ್ಟುಕೊಳ್ಳುವ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು ಎಂದರು.
ಆರೋಗ್ಯ ನಿಧಿ ಹೆಚ್ಚಿಸಿ :
ಸಂಸ್ಥೆಯ ಆರೋಗ್ಯ ಸುರಕ್ಷಾ ಯೋಜನೆಗೆ ಅನುವು ಮಾಡುವ ನಿಧಿ ವರ್ಷದಿಂದ ವರ್ಷಕ್ಕೆ ಹೆಚ್ಚಿಸಬೇಕು ಎಂದು ರೈತ ಸದಸ್ಯರೊಬ್ಬರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ತಟೀಸರ, ಈಗಾಗಲೇ ೧.೫೬ಕೋಟಿ ರೂ. ಈ ನಿಧಿಯಲ್ಲಿದೆ. ಹೀಗಿರುವಾಗ ಅನಗತ್ಯವಾಗಿ ಮತ್ತಷ್ಟು ನಿಧಿ ಸಂಗ್ರಹಿಸಿಡುವುದು ಸರಿಯಲ್ಲ. ನಿಧಿಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಠೇವುಗಳಿಗೆ ಉತ್ತಮ ಬಡ್ಡಿ…
ರೈತ ಸದಸ್ಯರು ಕನಿಷ್ಟ ಲಕ್ಷ ರೂ.ಗಿಂತ ಹೆಚ್ಚಿಡುವ ಠೇವು ಹಾಗೂ ಸಹಕಾರ ಸಂಘಗಳು ೫೦ಲಕ್ಷ ರೂ.ಗಿಂತ ಹೆಚ್ಚಿಡುವ ಠೇವಿಗೆ ಶೇ.೮.೫೦ಬಡ್ಡಿ ನೀಡಲಾಗುತ್ತದೆ ಇದು ೪೭೫ದಿನಗಳಿಗೆ ಅನ್ವಯವಾಗುತ್ತದೆ ಎಂದು ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ವಿನಯ ಹೆಗಡೆ ತಿಳಿಸಿದರು.
ಉಪಾಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಮಾಜಿ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಹಾಗೂ ನಿರ್ದೇಶಕರು ಹಾಜರಿದ್ದರು.
100ಕೋಟಿ ರೂ. ಅಡಕೆ, ಕಾಳುಮೆಣಸು ಖರೀದಿ…
ಕಳೆದ ಸಾಲಿನಲ್ಲಿ ಬೆಳೆಗಳ ಬೆಲೆ ಸ್ಥಿರತೆಗೆ ಸಂಘವು ಟೆಂಡರ್‌ನಲ್ಲಿ 100ಕೋಟಿ ರೂ.ಗೂ ಅಧಿಕ ಅಡಕೆ ಮತ್ತು ಕಾಳುಮೆಣಸು ಖರೀದಿ ಮಾಡಿದೆ. ಮಹಸೂಲು ಆಧಾರದಲ್ಲಿ ಸದಸ್ಯರಿಗೆ 67.84ಲಕ್ಷ ರೂ., ಸದಸ್ಯ ಸಂಘಗಳಿಗೆ 66.59ಲಕ್ಷ ರೂ. ರಿಬೇಟ್ ನೀಡಿದೆ ಎಂದು ವಿನಯ ಹೆಗಡೆ ವಿವರಿಸಿದರು.
ಆಮದು ಅಡಕೆ ನಿಯಂತ್ರಿಸಿ…
ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಭೆಯಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ಕೊಳೆ ರೋಗ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು. ಎಲೆಚುಕ್ಕೆ ರೋಗಕ್ಕೆ ಸೂಕ್ತ ಔಷಧ ಮಾರ್ಗದರ್ಶನ ನೀಡಬೇಕು. ವಿದೇಶದಿಂದ ಆಮದಾಗುವ ಅಡಕೆ ನಿಯಂತ್ರಣಕ್ಕೆ ಕ್ರಮವಾಗಬೇಕು.
ಪಾರಂಪರಿಕವಲ್ಲದ ಪ್ರದೇಶದಲ್ಲಿ ಅಡಕೆ ಬೆಳೆ ನಿರ್ಬಂಧಿಸಲು ಸಂಸದರಿಗೆ ಮನವಿ ಮಾಡಲಾಯಿತು.