ಜೋಯಿಡಾ: ಕಸ್ತೂರಿ ರಂಗನ್ ವರದಿ ಆಧರಿಸಿ ಘೋಷಿಸಿರುವ ಪರಿಸರ ಸೂಕ್ಷ್ಮ ಪ್ರದೇಶ (ESA) ಕರಡು ಅಧಿಸೂಚನೆ ಹಾಗೂ ಸಚಿವರ ಅತಿಕ್ರಮಣ ತೆರವು ನಿರ್ಧಾರ ವಿರೋಧಿಸಿ, ಬೆಂಗಳೂರಿಗೆ ಶಾಸಕರ ನೇತೃತ್ವದಲ್ಲಿ ಸರ್ವ ಪಕ್ಷ ನಿಯೋಗ ತೆರಳಿ ತಕರಾರು ಸಲ್ಲಿಸುವುದು ಮತ್ತು ಜೋಯಿಡಾದಲ್ಲಿ ಹೋರಾಟ ಮಾಡುವ ನಿರ್ಣಯ ಇಂದು ಕಾಳಿ ಬ್ರಿಗೇಡ್ ಸಭೆಯಲ್ಲಿ ಜೋಯಿಡಾ ತಾಲೂಕಿನ ಪರವಾಗಿ ಕೈಗೊಳ್ಳಲಾಯಿತು.
ಇಎಸ್ಎ ಮತ್ತು ಸಚಿವ ಈಶ್ವರ ಖಂಡ್ರೆ ಅತಿಕ್ರಮಣ ತೆರವು ಹೇಳಿಕೆಯಿಂದ ಗೊಂದಲಕ್ಕೆ ಒಳಗಾಗಿದ್ದ ಜೋಯಿಡಾ ತಾಲೂಕಿನ ಜನರ ಅಭಿಪ್ರಾಯ ಸಂಗ್ರಹಿಸಲು ಕಾಳಿ ಬ್ರಿಗೇಡ್ ತಾಲೂಕಿನ ಜನರ ಪಕ್ಷಾತೀತ ಇಂದು ಆಯೋಜಿಸಿತ್ತು. ಸಭೆಯಲ್ಲಿ ಸಮಗ್ರ ಚರ್ಚೆ ನಂತರ ಈ ನಿರ್ಣಯ ಕೈಗೊಳ್ಳಲಾಯಿತು.
ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಶೇಷ ಗ್ರಾಮ ಮಾಡುವ ಮೂಲಕ ಇಎಸ್ಎ ಕರಡು ಅಧಿಸೂಚನೆ ವಿರೋಧಿಸಿ ಠರಾವು ಮಾಡಿ, ತಕರಾರು ಸಲ್ಲಿಸುವುದು. ಪ್ರತಿಯೊಬ್ಬರೂ ಇದಕ್ಕೆ ತಕರಾರು ಸಲ್ಲಿಸಲು ಜಾಗೃತಿ ಮೂಡಿಸುವ ನಿರ್ಣಯ ಕೈಗೊಳ್ಳಲಾಯಿತು.ಸಭೆಯನ್ನು ಉದ್ದೇಶಿಸಿ ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನೀಲ ದೇಸಾಯಿ ಮಾತನಾಡಿ, ಇಎಸ್ಎ ಜಾರಿಯಿಂದ ತಾಲೂಕಿನ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡದರು. ಹಾಗೂ ಸಚಿವ ಖಂಡ್ರೆ ಅವರ ಅತಿಕ್ರಮಣ ತೆರವಿನಂತಹ ಕಠಿಣ ನಿರ್ಧಾರಗಳಿಂದ ಇಲ್ಲಿನ ಬಡವರ ಮೇಲೆ ಆಗುವ ತೊಂದರೆಗಳನ್ನು ವಿವರಿಸಿದರು.
ಸಾಮಾಜಿಕ ಕಾರ್ಯಕರ್ತ ರವಿ ರೇಡಕರ ಮಾತನಾಡಿ ತಾಲೂಕಿನ ಹಿತದೃಷ್ಟಿಯಿಂದ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗಿದೆ. ಸರ್ಕಾರ ಕಠಿಣ ಕಾನೂನುಗಳಿಂದ ಜೋಯಿಡಾ ತಾಲೂಕಿಗೆ ವಿನಾಯಿತಿ ನೀಡಬೇಕು. ಇದಕ್ಕಾಗಿ ತಾವು ಯಾವುದೇ ಹೋರಾಟಕ್ಕೆ ಸಿದ್ಧ ಎಂದರು.
ಸಭೆಯನ್ನು ಉದ್ದೇಶಿಸಿ ಶಿವಪುರ ಗೋಪಾಲ ಭಟ್ಟ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ವ್ಯಾಪಾರಿ ಸಂಘದ ಅಧ್ಯಕ್ಷ ರಫಿಕ ಖಾಜಿ, ಉಳವಿ ಮುಕಾಶಿ, ಕಾಳಿ ಬ್ರಿಗೇಡ್ ಅಧ್ಯಕ್ಷ ಉಮೇಶ್ ವೇಳಿಪ, ಗಾಂಗೋಡಾ ಗ್ರಾ. ಪಂ. ಅಧ್ಯಕ್ಷ ಪ್ರವೀಣ ದೇಸಾಯಿ, ರೂಪೇಶ ದೇಸಾಯಿ, ಊರ ಪ್ರಮುಖ ಕೆ. ಎಲ್. ನಾಯ್ಕ, ದತ್ತಾರಾಮ ದೇಸಾಯಿ, ದಿನೇಶ ದೇಸಾಯಿ, ಮುಡಿಯೇ ಶಂಕರ ವೇಳಿಪ, ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಳಿ ಬ್ರಿಗೇಡ್ ಮಾಜಿ ಅಧ್ಯಕ್ಷ ಸತೀಶ ನಾಯ್ಕ, ಕಿರಣ ನಾಯ್ಕ, ಕಾರ್ಯದರ್ಶಿ ಸಮೀರ ಮುಜಾವರ, ಪ್ರಭಾಕರ ನಾಯ್ಕ, ನಾರಾಯಣ ಹೆಬ್ಬಾರ, ಮುಂತಾದ ನೂರಾರು ಜನರು ಉಪಸ್ಥಿತರಿದ್ದರು.