ಹೊನ್ನಾವರ: ತಾಲೂಕಿನ ಖರ್ವಾ ಕೊಳಗದ್ದೆಯ ಶ್ರೀ ಸಿದ್ದಿವಿನಾಯಕ ಪ್ರೌಢಶಾಲೆಯಲ್ಲಿ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಶನಿವಾರ ಯಶಸ್ವಿಯಾಗಿ ನಡೆಯಿತು.
ರೋಟರಿಕ್ಲಬ್, ಶ್ರೀ ಸಿದ್ದಿವಿನಾಯಕ ವಿವಿಧೋದ್ದೇಶ ವಿದ್ಯಾವರ್ಧಕ ಮಂಡಳಿ, ಖರ್ವಾ, ಸಂಗಮ ಸೇವಾ ಸಂಸ್ಥೆ ,ಸ್ಪಂದನಾ ಸೇವಾ ಟ್ರಸ್ಟ್, ಹಡಿನಬಾಳ, ಇವರ ಸಂಯುಕ್ತ ಆಶ್ರಯದಲ್ಲಿ ಶಿಬಿರ ನಡೆಯಿತು. ದೀಪ ಪ್ರಜ್ವಲನದ ಮೂಲಕ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೋಟರಿಕ್ಲಬ್ ಅಧ್ಯಕ್ಷ ಸೂರ್ಯಕಾಂತ ಸಾರಂಗ ಮಾತನಾಡಿ,ಕಳೆದ ನಲವತ್ತು ವರ್ಷಗಳಿಂದ ರೋಟರಿ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಕ್ರಮದ ಜತೆಗೆ ಮಕ್ಕಳಿಗಾಗಿ ಲೀಡರ್ ಶಿಪ್ ಕಾರ್ಯಕ್ರಮ,ಚೆಸ್ ಸ್ಪರ್ಧೆ, ಅಂಧಮಕ್ಕಳಿಗಾಗಿ ರಾಷ್ಟ್ರ ಮಟ್ಟದ ಚೆಸ್ ಟೂರ್ನಮೆಂಟ್ ಹಮ್ಮಿಕೊಳ್ಳುತ್ತಾ ಬಂದಿದೆ. ರೋಟರಿ ಕುಟುಂಬದ ಎಲ್ಲ ಸದಸ್ಯರು ಸಹಕಾರ ನೀಡುತ್ತಾ ಬಂದಿದ್ದಾರೆ.ಇಂದು ಆಯೋಜಿಸಿದ ಕಾರ್ಯಕ್ರಮದ ಪ್ರಯೋಜನ ಎಲ್ಲರಿಗೂ ಸಿಗುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿ,ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ದಿವಿನಾಯಕ ವಿವಿಧೋದ್ದೇಶ ವಿದ್ಯಾವರ್ಧಕ ಮಂಡಳಿಯ ನಿರ್ದೇಶಕ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ವಿವಿಧ ಉದ್ದೇಶಗಳನ್ನಿಟ್ಟುಕೊಂಡು ಆರಂಭವಾದ ನಮ್ಮ ಸಂಸ್ಥೆ ಸುದೀರ್ಘ 64 ವರ್ಷ ಪೂರೈಸಿದ್ದೇವೆ.ಇಂತಹ ಸಂಸ್ಥೆಯಲ್ಲಿ ಇಂದು ಜನುಪಯೋಗಿ ಕಾರ್ಯಕ್ರಮ ನಡೆದಿದೆ.ರೋಟರಿ ಕ್ಲಬ್ ಅನೇಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದೆ.ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮದ ಅವಶ್ಯಕತೆ ಇದೆ.ಮುಂದೆಯು ಸಹ ಮುಕ್ತವಾಗಿ ಕಾರ್ಯಕ್ರಮ ನಡೆಸಲು ಸಹಕಾರ ನೀಡುತ್ತೇವೆ ಎಂದರು. ಸಮಾಜಮುಖಿ ಸೇವೆ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಬೇಕು. ಹೋಗಳುವುದು ಬೇಡ ಅವರಿಗಾಗಿ ನಾವು ಪ್ರಾರ್ಥಿಸಬೇಕು.ಆಗ ಅವರ ಶಕ್ತಿ ಹೆಚ್ಚಾಗಿ ಆಯುಷ್ಯವೃದ್ದಿಯಾಗುತ್ತದೆ.ಸಮಾಜಕ್ಕೆ ಒಳ್ಳೆಯ ಕೊಡುಗೆ ಸಿಗುತ್ತದೆ.ಪ್ರತಿಯೊಂದು ಕೆಲಸವನ್ನು ಇಷ್ಟಪಟ್ಟು ಮಾಡಿದಾಗ ಅದರ ಪ್ರತಿಫಲ ಸಿಗುತ್ತದೆ ಎಂದರು.
ಇವೆಂಟ್ ಚೆರ್ ಮೆನ್ ರೋ.ಡಾ.ಗಾಯತ್ರಿ ಗುನಗಾ, ರೋ.ಮಹೇಶ್ ಕಲ್ಯಾಣಪುರ, ಶಿಬಿರದ ಮುಖ್ಯಸ್ಥ ಡಾ.ಕಲ್ಯಾಣ, ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ,ಸ್ಪಂದನಾ ಸೇವಾ ಟ್ರಸ್ಟ್ ಅಧ್ಯಕ್ಷ ಗಣಪತಿ ಹೆಗಡೆ, ಶ್ರೀ ಸಿದ್ದಿವಿನಾಯಕ ವಿವಿಧೋದ್ದೇಶ ವಿದ್ಯಾವರ್ಧಕ ಮಂಡಳಿ ಕಾರ್ಯದರ್ಶಿ ಎಸ್. ಎನ್ ನಾಯ್ಕ,ಶ್ರೀ ಸಿದ್ದಿವಿನಾಯಕ ಫ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್ ಎಲ್ ನಾಯ್ಕ, ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ಮಹೇಶ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಮಣಿಪಾಲದ ಕೆ.ಎಂ.ಸಿ. ದಂತ ಮಹಾವಿದ್ಯಾಲಯದ ತಜ್ಞ ವೈದ್ಯ ತಂಡದಿಂದ ಮುಂಜಾನೆ 10-30 ರಿಂದ ಮಧ್ಯಾಹ್ನ 2 ರ ವರೆಗೆ ಶಿಬಿರ ನಡೆಯಿತು. ಬಾಯಿ ಮತ್ತು ಹಲ್ಲುಗಳ ಸಂಪೂರ್ಣ ತಪಾಸಣೆ ಮತ್ತು ಸಲಹೆ, ಹುಳುಕಿನ ಹಲ್ಲುಗಳಿಗೆ ಸಿಮೆಂಟ್ ತುಂಬಿಸುವಿಕೆ, ಹಲ್ಲುಗಳನ್ನು ಸ್ವಚ್ಛಗೊಳಿಸುವಿಕೆ, ಅನಾರೋಗ್ಯಕರ ಹಲ್ಲುಗಳನ್ನು ಕೀಳುವುದು, ಮಕ್ಕಳಿಗಾಗಿ ವಿಶೇಷ ತಪಾಸಣೆ ನಡೆಯಿತು. 281 ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.