ಕಾರವಾರ: ಆರೋಗ್ಯ ಇಲಾಖೆಯ ಮೂಲಕ ಜಿಲ್ಲೆಯ ಸಾರ್ವಜನಿಕರಿಗೆ ನೀಡುತ್ತಿರುವ ಎಲ್ಲಾ ವಿಧದ ವೈದ್ಯಕೀಯ ಸೇವೆಗಳಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ ಹಾಗೂ ಆರೋಗ್ಯ ಸೇವೆಗಳು ಎಲ್ಲಾ ವಯೋಮಾನದವರಿಗೂ ತಲುಪಿಸುವ ರೀತಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಆರೋಗ್ಯ ಇಲಾಖೆಯ ವಿವಿಧ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ ಅಂಗನವಾಡಿಯಿಂದ ಪ್ರೌಢಶಾಲೆಗಳಲ್ಲಿರುವ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯ ನಿಗಧಿತ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಎಲ್ಲಾ ವಿದ್ಯಾರ್ಥಿಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಿ, ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ವಿದ್ಯಾರ್ಥಿಗಳಿಗೆ ನಿಗಧಿತ ಲಸಿಕೆಗಳನ್ನು ತಪ್ಪದೇ ನೀಡಿ, ಯಾವುದೇ ವಿದ್ಯಾರ್ಥಿ ಲಸಿಕೆಯಿಂದ ವಂಚಿತರಾಗದಂತೆ ಎಚ್ಚರವಹಿಸಿ ಎಂದರು.
ವಿವಿಧ ಸಾಂಕ್ರಾಮಿಕ ರೋಗಗಳು ಮತ್ತು ಇತರೆ ಖಾಯಿಲೆಗಳ ಕುರಿತು ವಹಿಸಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸಂಖ್ಯೆಯ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರಿಗೆ ತಮ್ಮ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ , ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಯಾವುದೇ ಔಷಧಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಹಾಗೂ ನಿಗಧಿತ ಲಸಿಕಾ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಗುರಿ ಸಾಧಿಸುವಂತೆ ತಿಳಿಸಿದ ಅವರು, ಯಾವುದೇ ಕೊರತೆಗಳಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.
ಶಾಲಾ ಮತ್ತು ಕಾಲೇಜು ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ಕುರಿತಂತೆ ಇರುವ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆ ಸೂಚನೆ ನೀಡಿದ ಅವರು, ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳ ಕುರಿತಂತೆ ಹೆಚ್ಚಿನ ಜಾಗೃತಿ ಮೂಡಿಸುವುದ ಜೊತೆಗೆ ಆರೋಗ್ಯ ಇಲಾಖೆ, ಪೊಲೀಸ್ ಮತ್ತು ಅಬಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಕೋಟ್ಪಾ ಕಾಯಿದೆ ಉಲ್ಲಂಘನೆ ಮಾಡುವವರ ವಿರುದ್ದ ಹೆಚ್ಚಿನ ಸಂಖ್ಯೆಯ ದಾಳಿಗಳನ್ನು ಅಯೋಜಿಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ತಂಬಾಕು ಉತ್ಪನ್ನಗಳ ವ್ಯಾಪಾರಕ್ಕಾಗಿ ರೂಪಿಸಿರುವ ಪ್ರತ್ಯೇಕ ಪರವಾನಗೆ ನೀತಿಯನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಿ ಮತ್ತು ಜಿಲ್ಲೆಯ ಪ್ರವಾಸಿ ತಾಣಗಳನ್ನು ಟೋಬ್ಯಾಕೋ ಪ್ರೀ ಟೂರಿಸಂ ಪ್ರದೇಶಗಳು ಎಂದು ಘೋಷಣೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಬಹುತೇಕ ಕಾಯಿಲೆಗಳು ಅನೈರ್ಮಲ್ಯ ಮತ್ತು ಸೊಳ್ಳೆಗಳಿಂದ ಹರಡಲಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಸೊಳ್ಳೆಗಳ ನಿಯಂತ್ರಣ ಕ್ರಮಗಳ ಬಗ್ಗೆ ಅರಿವು ಮೂಡಿಸಿ, ಪ್ರತೀ ಶುಕ್ರವಾರ ನಡೆಯುತ್ತಿರುವ ಲಾರ್ವಾ ನಾಶ ಕಾರ್ಯಕ್ರಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎಂದರು.
ಆರೋಗ್ಯ ಇಲಾಖೆಯಲ್ಲಿ ಕ್ಷೇತ್ರಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಸಾರ್ವಜನಿಕರಿಗೆ ಆರೋಗ್ಯ ಮಾಹಿತಿಯನ್ನು ಸಮರ್ಪಕವಾಗಿ ತಲುಪಿಸುವಂತೆ ನೋಡಿಕೊಳ್ಳಿ, ಜಿಲ್ಲೆಯ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಆರೋಗ್ಯ ಇಲಾಖೆಗೆ ಅಗತ್ಯ ಸಹಕಾರ ನೀಡಬೇಕು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸುವ ಮೂಲಕ ಜಿಲ್ಲೆಯ ಸಾರ್ವಜನಿಕರ ಆರೋಗ್ಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮಂಕಿಫಾಕ್ಸ್ ಕುರಿತು ಜಾಗೃತಿ ಮೂಢಿಸುವ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್, ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಳಕರ್, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಸಿದ್ದಲಿಂಗಯ್ಯ, ಹಾಗೂ ವಿವಿಧ ಇಲಾಖೆಗಳ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು..