ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಪುತ್ಥಳಿಗೆ ಮಾಲಾರ್ಪಣೆ | ಕಾರ್ಯಕರ್ತರೊಡಗೂಡಿ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಭೇಟಿ
ಶಿರಸಿ: ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಮಾಡುತ್ತಿರುವುದೇನು? ಸರಕಾರ ಬಂದ ವರ್ಷದಲ್ಲೇ ಹಗರಣಗಳ ಸರಮಾಲೆ ಇದೆ. ಸಿಎಂ ಮೇಲೆ ಹಗರಣಗಳ ಅನುಮಾನ ಇರುವುದರಿಂದ ತನಿಖೆ ಮಾಡಬೇಕಾಗಿದೆ. ಮೂಡಾ, ವಾಲ್ಮೀಕಿ ಹಗರಣದ ದೂರು ಬಂದಾಗ ತನಿಖೆಗೆ ರಾಜ್ಯಪಾಲರು ಆದೇಶ ಮಾಡಿದ್ದಾರೆ. ಯಾವುದೇ ಒಬ್ಬ ಮುಖ್ಯಮಂತ್ರಿ ಇಳಿಸಲು ವಿರೋಧ ಪಕ್ಷದವರಾಗಿ ನಾವು ರಾಜಕಾರಣ ಮಾಡುತ್ತಿಲ್ಲ. ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಲಿ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ರಾಷ್ಟ್ರ ಕಂಡ ಧೀಮಂತ ನಾಯಕ ದಿವಂಗತ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಜಯಂತಿ ಪ್ರಯುಕ್ತ ಇಲ್ಲಿನ ರಾಮಕೃಷ್ಣ ಹೆಗಡೆ ವೃತ್ತದಲ್ಲಿರೋ ರಾಮಕೃಷ್ಣ ಹೆಗಡೆ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ136 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ನೋಡಿದಾಗ ಜನ ಕಾಂಗ್ರೆಸ್ ಸರ್ಕಾರದ ಮೇಲೆ ಇಟ್ಟ ನಂಬಿಕೆಗೆ ಧಕ್ಕೆ ಆಗಿದೆ. ಯಾರೋ ಬೀದಿಲಿ ಹೋಗೋರು ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಕೊಟ್ಟಿದ್ದಕ್ಕೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬೀದಿಯಲ್ಲಿ ಇರುವ ಜನರ ಮತಗಳಿಂದಲೇ ಇವರು ಅಧಿಕಾರಕ್ಕೆ ಬಂದಿದ್ದಾರೆ ಎನ್ನುವುದನ್ನು ಮರೆಯಬಾರದು. ಕಾಂಗ್ರೆಸ್‌ನಿಂದ ನೈತಿಕ ಮೌಲ್ಯ ಮಾಯವಾಗಿದೆ. ನಾವೂ ಇಂಥ ಸನ್ನಿವೇಶ ಎದುರಿಸಿದ್ದೇವೆ. ಆದರೆ ನೈತಿಕ ಮೌಲ್ಯಕ್ಕೆ ಬೆಲೆ ನೀಡಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆ ಮಾಡುವುದಕ್ಕೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದು, ಈ ವಿಷಯ ರಾಜ್ಯ ಹೈಕೋರ್ಟ್ ಮುಂದೆ ಇದೆ. ಅದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಲಿ. ತನಿಖೆಯಲ್ಲಿ ಅವರ ಮೇಲಿನ ಅನುಮಾನಗಳು ಸತ್ಯವಲ್ಲ ಎಂದರೆ ಅವರು ಪುನಃ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿ ಎಂದರು. ವಿರೋಧ ಪಕ್ಷದ ವಿರುದ್ಧ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ ಸಮಾವೇಶ ಮಾಡಿದ ಕೀರ್ತಿ ಡಿಕೆಶಿಗೆ ಸಲ್ಲುತ್ತದೆ. ಇವರು ಸರ್ಕಾರ ನಡೆಸಲು ಯೋಗ್ಯರಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ನಮ್ಮ ಕುಟುಂಬದಿಂದ ಎಂದಿಗೂ ದ್ವೇಷದ ರಾಜಕಾರಣ ನಡೆದಿಲ್ಲ. ನಮ್ಮ ಜೀವಮಾನದಲ್ಲಿ ನೈತಿಕ ಮೌಲ್ಯಗಳಿಗೆ ಬೆಲೆ ನೀಡಿದ್ದೇವೆ.
ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್, ಬಿಜೆಪಿಯ ಮುಖಂಡರದ್ದೂ ಹಗರಣ ಇದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನ ಯಾವುದೋ ವ್ಯಕ್ತಿಗೊಸ್ಕರ ಬದಲಾವಣೆ ಆಗಲ್ಲ. ಇದು ಎಲ್ಲರಿಗೂ ಒಂದೇ. ಯಾವುದೇ ವಿಚಾರ ತನಿಖೆ ಮಾಡಲಿ. ನಾವೂ ಕೂಡ ಎದುರಿಸುತ್ತೇವೆ. ಆದರೆ ಬಿಜೆಪಿಯ ಚಿಹ್ನೆಯಡಿ ಗೆದ್ದು, ಸರ್ಕಾರ ಬದಲಾವಣೆಯಾದಾಗ ತಮ್ಮ ಕೆಲಸಕ್ಕಾಗಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಛತ್ರಿ ಹಿಡಿಯುವ ಶಾಸಕರು ಇದ್ದಾರೆ. ಹೀಗಾಗಿಯೇ ಈ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಅಂಥ ಶಾಸಕರಲ್ಲಿ ಶಿವರಾಮ್ ಹೆಬ್ಬಾರ್ ಕೂಡ ಒಬ್ಬರು. ಕಮಲದ ಹೂವಿನ ಚಿಹ್ನೆಯಲ್ಲಿ ಗೆದ್ದವರು ಪಕ್ಷ ವಿರೋಧಿ ಹೇಳಿಕೆ ನೀಡಬಾರದು ಎಂದರು.
ಮಾರಿಕಾಂಬೆ ಆಶೀರ್ವಾದದ ಫಲ :
ಚುನಾವಣೆಗೆ ಮುನ್ನ ಶ್ರೀ ಮಾರಿಕಾಂಬೆಯಲ್ಲಿ ಆಶೀರ್ವಾದ ಬೇಡಿಕೊಂಡು ಹೋಗಿದ್ದೆ. ದೇವಿಯ ಆಶೀರ್ವಾದದಿಂದ ಮತ್ತೆ 4ನೇ ಬಾರಿ ಗೆದ್ದಿದ್ದೇನೆ. ಹೀಗಾಗಿ ಶ್ರಾವಣ ಮಾಸದಲ್ಲಿ ಬರಬೇಕು ಎಂದು ಬಂದಿದ್ದೇನೆ. ಈ ಜೊತೆಗೆ ಚಾತುರ್ಮಾಸ್ಯದ ಆಚರಣೆಯಲ್ಲಿರುವ ಗುರುಗಳ ಆಶೀರ್ವಾದ ಪಡೆಯುವುದಕ್ಕೆ ಆಗಮಿಸಿದ್ದೇನೆ ಎಂದು ಸಂಸದ ರಾಘವೇಂದ್ರ ಹೇಳಿದರು.