ಯಲ್ಲಾಪುರ: ತಾಲೂಕಿನ ಭರಣಿಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ನಡೆಯಿತು.
ಐದು ವರ್ಷ ಒಳಗಿನ ಮತ್ತು ಐದು ವರ್ಷ ನಂತರದ ಮಕ್ಕಳಿಗೆ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಸುಮಾರು 25 ಮಕ್ಕಳು ಶ್ರೀಕೃಷ್ಣ ವೇಷ ತೊಟ್ಟು ಸಂಭ್ರಮಿಸಿದರು. ಎಂಟು ತಿಂಗಳ ಬಾಲಕನೊಬ್ಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.
ದೇವಸ್ಥಾನದ ಧರ್ಮದರ್ಶಿ ಎ. ಜಿ. ನಾಯ್ಕ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆರಿಯಪ್ಪ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಹುಮಾನ ಪ್ರಾಯೋಜಕರಾದ ಶಿಕ್ಷಕ ಸತೀಶ್ ಶೆಟ್ಟಿ, ಆಶಾ ಶೆಟ್ಟಿ ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಚಂದ್ರಕಲಾ ದೇವಾಡಿಗ ಕುಮಾರಿ ನಯನಾ ಪಟಗಾರ, ಆಶಾ ಶೆಟ್ಟಿ ಕಾರ್ಯನಿರ್ವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ರೇಣುಕಾ ದೇವಿ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ವಿಶೇಷತೆ ಎಂಬಂತೆ ಸಂಗೀತ ಕ್ಷೇತ್ರದಲ್ಲಿ ದೇಶ ಮಟ್ಟದಲ್ಲಿ ಸಾಧನೆ ಮಾಡಿದ, ತಾನ್ ಸೇನ್ ಪ್ರಶಸ್ತಿಗೆ ಭಾಜನರಾದ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅನ್ನದಾನ ಪ್ರಾಯೋಜಕರಾದ ಸತೀಶ ಶಿವರಾಮ ಶೆಟ್ಟಿ ಮತ್ತು ಆಶಾ ಸತೀಶ ಶೆಟ್ಟಿ ದಂಪತಿಗಳನ್ನು ದೇವಸ್ಥಾನದ ಪರವಾಗಿ ಸಂಗೀತ ಮಾಂತ್ರಿಕ ಪಂಡಿತ್ ಗಣಪತಿ ಭಟ್ಟ ಸನ್ಮಾನಿಸಿ ಗೌರವಿಸಿದರು