ಸಿದ್ದಾಪುರ: ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳು ಸಂವಿಧಾನದ ಆತ್ಮ ಇದ್ದಂತೆ. ಹಕ್ಕುಗಳು ಮಾನವನ ಘನತೆ ಮತ್ತು ಗೌರವವನ್ನು ಹೆಚ್ಚಿಸುವುದರೊಂದಿಗೆ ಆತನ ಸರ್ವಾಂಗೀಣ ಅಭಿವೃದ್ಧಿಗೂ ಕಾರಣವಾಗಿದೆ ಎಂದು ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಭರತಚಂದ್ರ ಕೆ.ಎಸ್. ಹೇಳಿದರು.
ತಾಲೂಕಿನ ಕೋಲಸಿರ್ಸಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ, ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆಗಳ ಆಶ್ರಯದಲ್ಲಿ ನಡೆದ ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು. ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ಹಕ್ಕುಗಳಿಗೆ ಪ್ರತಿಯಾಗಿ ತಮ್ಮ ತಮ್ಮ ಬಾಧ್ಯತೆಗಳನ್ನು ನೆನೆಪಿಸುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಪ್ರಶಾಂತ ತಾರಿಬಾಗಿಲ ಅಧ್ಯಕ್ಷತೆವಹಿಸಿದ್ದರು. ತಾಲೂಕು ವಕೀಲರ ಸಂಘದ ಸಹಕಾರ್ಯದರ್ಶಿ ರವಿಕುಮಾರ ನಾಯ್ಕ ಉಪಸ್ಥಿತರಿದ್ದರು.
ನ್ಯಾಯವಾದಿ ರೇಖಾ ಎಂ.ಹರವಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಹಾಗೂ ಪಿಎಸ್‌ಐ ಸಂಗೀತಾ ಕಾನಡೆ ಮಾನವ ಕಳ್ಳಸಾಗಣೆ ಕುರಿತು ಉಪನ್ಯಾಸ ನೀಡಿದರು.
ಉಪನ್ಯಾಸಕ ಮಂಜಪ್ಪ ಎಂ.ಜಿ.ಸ್ವಾಗತಿಸಿದರು. ಉಪನ್ಯಾಸಕ ಗೋಪಾಲ ಕಾನಳ್ಳಿ ಕಾರ್ಯಕ್ರಮ ನಿರ್ವಹಿಸಿದರು.