ಶಿರಸಿ: ಶಾಲೆಗಳ ಭದ್ರತೆ ಹಾಗೂ ಶಾಲಾ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಮಕ್ಕಳ ಸುರಕ್ಷಣೆಯ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶಿರಸಿ ತಾಲೂಕಿನ ದೇವನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಲಾಗಿದೆ.
2021-22ನೇ ಸಾಲಿನಲ್ಲಿ 2ಲಕ್ಷ ವೆಚ್ಚದಲ್ಲಿ ಸ.ಹಿ ಪ್ರಾಥಮಿಕ ಶಾಲೆ ಮುಂಡ್ಗಮನೆ ಹಾಗೂ 2022-23ನೇ ಸಾಲಿನಲ್ಲಿ ತಲಾ 3,52,500ರೂ ವೆಚ್ಚದಲ್ಲಿ ಸರಗುಪ್ಪ ಗ್ರಾಮದ ಕರೂರು ಶಾಲೆ, ಸರಗುಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ , ದೇವನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಲಸಿನ ಕಟ್ಟಾ ಸರ್ಕಾರಿ ಪ್ರಾಥಮಿಕ ಶಾಲೆ, ದೇವನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ದೇವನಳ್ಳಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕಾಂಪೌಂಡ್ ನಿರ್ಮಿಸಲಾಗಿದ್ದು, 2023-24 ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಲಸಿನ ಕಟ್ಟಾದಲ್ಲಿ 5 ಲಕ್ಷ ವೆಚ್ಚದಲ್ಲಿಯೂ ಉತ್ತಮ ರೀತಿಯ ತಡೆಗೋಡೆಗಳು ನಿರ್ಮಾಣವಾಗಿವೆ.
ಕಾಮಗಾರಿ ನಿರ್ಮಾಣದಿಂದಾಗಿ ಶಾಲೆಯ ಭದ್ರತೆ ಹಾಗೂ ಸುರಕ್ಷತೆಯೂ ಸಾಧ್ಯವಾಗಿದೆ. ಇನ್ನೂ ಶಾಲೆಯ ಸುತ್ತಲೂ ದನಕರು, ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಅನುಕೂಲವಾಗಿದೆ. ಶಾಲಾ ಮಕ್ಕಳು ಬಿಡುವಿನ ವೇಳೆಯಲ್ಲಿ ಕೈಗೊಂಡ ಕೈತೋಟ ನಿರ್ಮಾಣವು ನಶಿಸದಂತೆ ಕಾಪಾಡಲು ಸಹಾಯಕವಾಗಿದೆ.
ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾದಡಿ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು ಆಟದ ಮೈದಾನ ಅಭಿವೃದ್ಧಿ, ಶೌಚಾಲಯ, ಪೌಷ್ಟಿಕ ಕೈತೋಟ, ಕಾಂಪೌಂಡ್ ಗಳನ್ನು ನಿರ್ಮಿಸಿ ಶಾಲೆಗಳ ಅಭಿವೃದ್ಧಿಯತ್ತ ಗಮನ ಹರಿಸಲಾಗುತ್ತಿದೆ. ಇದಕ್ಕೆ ಗ್ರಾಮ ಪಂಚಾಯತ್ ಸಮಿತಿ ಹಾಗೂ ಸಾರ್ವಜನಿಕರು ಕೂಡಾ ಸಹಕರಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರ್ ವಾಸನ್ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಕಿರಣ್ ಮರಾಠಿ, ತಾಂತ್ರಿಕ ಸಹಾಯಕ ವಿನೋದ್ ಪಟಗಾರ್, ಐಇಸಿ ಸಂಯೋಜಕರು ಹಾಜರಿದ್ದರು.