ಜೋಯಿಡಾ : ತಾಲೂಕಿನ ಕ್ರಿಯಾಶೀಲ ಕರಾಟೆ ತರಬೇತುದಾರರಾದ ಸೇನ್ಸಾಯಿ ರಾಜೇಶ್ ಎಸ್. ಗಾವಡೆ ಸಾರಥ್ಯದ ಅಸ್ಪೈಯರ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಇದರ ವಿದ್ಯುಕ್ತ ಉದ್ಘಾಟನೆ ಮತ್ತು ಬೆಲ್ಟ್ ಟೆಸ್ಟ್ ಕಾರ್ಯಕ್ರಮವನ್ನು ಭಾನುವಾರ ಜೋಯಿಡಾದ ಆಸ್ನೋಟಿಕರ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಹಾಗೂ ನೂತನ ಕರಾಟೆ ಅಕಾಡೆಮಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಕರಾಟೆ ತರಬೇತುದಾರರಾದ ಅಂಕೋಲಾ ಅಂಬರಕೊಡ್ಲದ ಲಕ್ಷ್ಮಣ ಸೈರು ಹುಲಸ್ವಾರ ಕರಾಟೆ ಕಲಿಕೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ನಾಯಕತ್ವದ ಗುಣ ಬೆಳೆಯುತ್ತದೆ. ಕರಾಟೆಯಲ್ಲಿ ಸಾಧಿಸಿದರೆ ಉನ್ನತ ಶಿಕ್ಷಣವನ್ನು ಪಡೆಯಲು ಮೀಸಲಾತಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಆಸಕ್ತಿಯಿಂದ ಕರಾಟೆ ಕಲಿಯಬೇಕು ಎಂದರು. ಜೋಯಿಡಾದಂತ ತಾಲೂಕಿನಲ್ಲಿ ಕರಾಟೆಯಲ್ಲಿ ರಾಜೇಶ್ ಗಾವಡಾ ಅತ್ಯುತ್ತಮ ಸಾಧನೆಯನ್ನು ಮಾಡಿದವರು. ಅವರ ಗರಡಿಯಲ್ಲಿ ಈ ಭಾಗದ ಮಕ್ಕಳು ಕರಾಟೆಯಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಶಿಖರವನ್ನು ಏರಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊಲೀಸ್ ವೃತ್ತ ನಿರೀಕ್ಷಕರಾದ ಚಂದ್ರಶೇಖರ್ ಹರಿಹರ ಅವರು ಭಾಗವಹಿಸಿ ಮಾತನಾಡುತ್ತಾ ಆತ್ಮರಕ್ಷಣೆಯ ಜೊತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಕರಾಟೆ ಪರಿಣಾಮಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಯಲ್ಲಾಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಹಾಗೂ ಕರಾಟೆಯಲ್ಲಿ ಅಂತರಾಷ್ಟ್ರೀಯ ಸಾಧನೆಗೈದ ಸುನೀಲ್ ಎಸ್. ಗಾವಡೆ ಪ್ರಕೃತಿಯ ಸಿರಿ ಸೊಬಗಿನಲ್ಲಿ ಕಂಗೊಳಿಸುತ್ತಿರುವ ಜೋಯಿಡಾ ತಾಲೂಕಿನಲ್ಲಿ ಕರಾಟೆಯು ಕಂಗೊಳಿಸಲಿ. ಸಕಲ ಮೂಲಸೌಕರ್ಯಗಳಿರುವ ಪ್ರದೇಶದಲ್ಲಿ ಕರಾಟೆ ಕೇಂದ್ರಗಳನ್ನು ನಡೆಸುವುದು ಸಾಧನೆಯಲ್ಲ. ಆದರೆ ಹಿಂದುಳಿದ ಪ್ರದೇಶವಾದ ಜೋಯಿಡಾದಲ್ಲಿ ಕರಾಟೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿ,ನಡೆಸುತ್ತಿರುವುದು ನಿಜವಾದ ಸಾಧನೆ. ವಿದ್ಯಾರ್ಥಿಗಳು ಪರಿಶ್ರಮಪಟ್ಟು ಕರಾಟೆಯನ್ನು ಕಲಿಯಬೇಕು. ಈ ಕೇಂದ್ರ ತಾಲೂಕಿನ ಕರಾಟೆ ಕ್ಷೇತ್ರಕ್ಕೊಂದು ಭದ್ರ ಬುನಾದಿಯಾಗಲಿ ಎಂದು ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೋಯಿಡಾ ಗ್ರಾ.ಪಂ ಅಧ್ಯಕ್ಷೆ ಚಂದ್ರಿಮಾ ಮಿರಾಶಿ, ಪಿಎಸ್ಐ ಮಹೇಶ್ ಮಾಳಿ, ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ದೇಸಾಯಿ ಹಾಗೂ ಗೌರವ ಅತಿಥಿಗಳಾಗಿ ಕರಾಟೆಯ ರಾಷ್ಟ್ರೀಯ ಮುಖ್ಯ ತರಬೇತುದಾರರಾದ ಶೀಹಾನ ಶರಣಪ್ಪ ಬಮ್ಮಿಗಟ್ಟಿ, ಹುಬ್ಬಳ್ಳಿಯ ಕರಾಟೆ ತರಬೇತುದಾರರುಗಳಾದ ಸೇನ್ಸಾಯಿ ಮುಸ್ತಾಕ್ ಊಂಟವಾಲೆ, ಸೇನ್ಸಾಯಿ ಪುಲಕೇಶ ಮಲ್ಲ್ಯಾಳ, ಸೇನ್ಸಾಯಿ ನಾಗರಾಜ ಮೀಸ್ಕಿನ್, ಸೇನ್ಸಾಯಿ ದಾದಾಪೀರ ಊಂಟವಾಲೆ, ಸೇನ್ಸಾಯಿ ಸೇನ್ಸಾಯಿ ಸಂಜೀವ ಮಹಾಡೆ ಮತ್ತು ಸೇನ್ಸಾಯಿ ರಫೀಕ್ ರೋಟಿವಾಲೆ ಮೊದಲಾದವರು ಉಪಸ್ಥಿತರಿದ್ದು ಅಸ್ಪೈಯರ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಕೇಂದ್ರಕ್ಕೆ ಶುಭವನ್ನು ಹಾರೈಸಿದರು.
ಅಸ್ಪೈಯರ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿಯ ಪ್ರವರ್ತಕರು ಹಾಗೂ ಕರಾಟೆ ತರಬೇತುದಾರರಾದ ರಾಜೇಶ್.ಎಸ್.ಗಾವಡಾ ಅವರು ಸಂಸ್ಥೆ ಆರಂಭದ ಉದ್ದೇಶ ಮತ್ತು ಬೆಳೆದು ಬಂದ ಹಾದಿಯನ್ನು ವಿವರಿಸಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರು ನೀಡುತ್ತಿರುವ ಸಹಕಾರವನ್ನು ವಿಶೇಷವಾಗಿ ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಅಸ್ಪೈಯರ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಬೆಲ್ಟ್ ಟೆಸ್ಟ್ ಕಾರ್ಯಕ್ರಮವು ನಡೆಯಿತು.
ಸುಮಿತಾ ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಗ್ಲೋರಿ ಫರ್ನಾಂಡೀಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಪಾಲಕರು ಮತ್ತು ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.