Slide
Slide
Slide
previous arrow
next arrow

ಭಕ್ತಿಯಿಂದ ಜೀವನೋತ್ಸಾಹಕ್ಕೆ ಗಟ್ಟಿತನ; ಸ್ವರ್ಣವಲ್ಲೀ ಶ್ರೀ

300x250 AD

ಚಾತುರ್ಮಾಸ್ಯ ನಿಮಿತ್ತ ಭಕ್ತರಿಂದ‌ ನಿತ್ಯ ಗುರುಸೇವೆ | ಶಾಶ್ವತ ಆನಂದಕ್ಕೆ ಭಕ್ತಿ ಕಾರಣ

ಶಿರಸಿ: ಭಕ್ತಿಯಿಂದ ಜೀವನೋತ್ಸಾಹಕ್ಕೆ ಗಟ್ಟಿತನ ಬರುತ್ತದೆ ಎಂದು ಸೋಂದಾ‌ ಶ್ರೀ ಸ್ವರ್ಣವಲ್ಲೀ ‌ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿ ನುಡಿದರು.

ತಮ್ಮ ಹಾಗೂ‌ ತಮ್ಮ ಶಿಷ್ಯರ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳ ಪ್ರಥಮ ಚಾತುರ್ಮಾಸ್ಯ ವ್ರತಾಚರಣೆ ಹಿನ್ನಲೆಯಲ್ಲಿ ತೋಟದ ಸೀಮೆಯ ಶಿಷ್ಯ‌ರು ಸಲ್ಲಿಸಿದ ಸೇವೆ ಸ್ವೀಕರಿಸಿ ಹಿರಿಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನುಡಿದರು.
ಯಾವುದೇ ಕೆಲಸಗಳನ್ನು ಮಾಡುವವರಿಗೆ ಅವರ ಜೀವನದಲ್ಲಿ ಒಂದು ಉತ್ಸಾಹ ಇದ್ದರೆ ಮಾತ್ರ ಕೆಲಸಮಾಡಲು ಸಾಧ್ಯ. ಉತ್ಸಾಹ ಎಲ್ಲರಿಗೂ ಬೇಕು. ಉತ್ಸಾಹ ಇಲ್ಲದೇ ಬೇಸರದ್ದಲ್ಲಿ ಇದ್ದರೆ ಕೆಲಸ ಮಾಡಲು ಆಗುವುದಿಲ್ಲ, ಕಷ್ಟವು ಆಗುತ್ತದೆ. ಉತ್ಸಾಹವನ್ನು ಯಾವಾಗಲೂ ಕಾದುಕೊಂಡು, ಕಡಿಮೆ ಆಗದ ರೀತಿಯಲ್ಲಿ ಇಟ್ಟುಕೊಂಡು ಹೋಗುವುದರಿಂದ ಎಲ್ಲ ಸಾಧನೆಗಳಿಗೆ, ಎಲ್ಲಾ ಕೆಲಸಗಳಿಗೆ ಅನುಕೂಲವಾಗುತ್ತದೆ. ಅಂತಹ ಜೀವನೋತ್ಸಾಹಕ್ಕೆ ಗಟ್ಟಿತನ ಬರುವುದು ದೇವರ ಭಕ್ತಿಯಿಂದ ಎಂದ ಅವರು, ಜೀವನೋತ್ಸಾಹ ಏನು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಡಿವಿಜಿ ಯವರ ಒಂದು ಪದ್ಯವನ್ನು ಉದಾಹರಿಸಿ ವಿವರಿಸಿದರು.

300x250 AD

ನಿನ್ನ ಕರ್ತವ್ಯವನ್ನು ನೀನು ಜಿಗುಪ್ಸೆಗೆ ಒಳಪಡದೇ ಸತತವಾಗಿ ಮಾಡಿಕೊಳ್ಳುತ್ತಾ ಹೋಗು. ತಾನು ಮಾಡುವ ಕೆಲಸದಲ್ಲಿ ಬೇಸರ. ನಿರುತ್ಸಾಹಗಳಿಗೆ ಅವಕಾಶವನ್ನು ಕೊಡದೇ ಕಾಯಕವನ್ನು ಮಾಡುತ್ತಾ ಹೋಗಬೇಕು. ಜಿಗುಪ್ಸೆ ಮನಸ್ಸಿನಲ್ಲಿ ಪ್ರವೇಶ ಮಾಡುತ್ತದೆ ಎಂಬುದು ಗೊತ್ತಾದ ತಕ್ಷಣವೇ ಕೆಲಸದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಜಿಗುಪ್ಸೆಯನ್ನು ಹೊಗಲಾಡಿಸಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಇರುವಂತಹ ಕಾಲಕ್ಕೆ ತಕ್ಕನಾದ ಧರ್ಮವನ್ನು ಬಿಡಬಾರದು. ಭವಿಷ್ಯತ್ ಮತ್ತು ಭೂತಗಳ ಅತಿಯಾದ ಚಿಂತೆಯನ್ನು ಮಾಡಬಾರದು. ತನ್ನ ಕಾಯಕವನ್ನು ಜಿಗುಪ್ಸೆಗೆ ಒಳಪಡದೇ ಮಾಡುತ್ತಾ ಇರಬೇಕು. ಇದೇ ಉತ್ಸಾಹದ ಲಕ್ಷಣ. ಈ ಉತ್ಸಾಹಕ್ಕೆ ಭಕ್ತಿಯೇ ಗಟ್ಟಿತನವನ್ನು ಕೊಡುತ್ತದೆ. ನಮ್ಮ ಮನಸ್ಸಿನಲ್ಲಿ ಬರುವ ಭಾವನೆಗಳಲ್ಲಿ ಮೂರು ರೀತಿಯಿದೆ. ಸಾತ್ವಿಕ,ರಾಜಸ,ತಾಮಸ ಎಂಬ ಭಾವಗಳು. ಈ ಭಾವಗಳಲ್ಲಿ ಉತ್ಸಾಹ ಎಂಬುದು ಸತ್ವಗುಣದ ಕಾರ್ಯ. ಉತ್ಸಾಹಕ್ಕೆ ಮೂಲವಸ್ತುವಾದ ಸತ್ವಗುಣದ ಬೆಳವಣಿಗೆಯಾದರೆ ಉತ್ಸಾಹ ಸತತವಾಗಿ ಬರುತ್ತದೆ. ಅದಕ್ಕೆ ದೇವರ ಭಕ್ತಿ ತುಂಬಾ ಸಹಾಯಕ. ಜೀವನೋತ್ಸಾಹಕ್ಕೆ ಗಟ್ಟಿತನ ಬರುವುದು ದೇವರ ಭಕ್ತಿಯಿಂದ‌ ಎಂದರು.
ಅನೇಕ ನಾಸ್ತಿಕರಿಗೂ ಕೂಡ ಜೀವನದ ಉತ್ಸಾಹ ಇರುತ್ತದೆ. ಆದರೆ ವೃದ್ಧಾಪ್ಯ, ಯಾವುದೋ ಮಹಾ ರೋಗಗಳು ಬಂದಾಗ ಆ ಉತ್ಸಾಹ ಕುಸಿದು ಬಿಡುತ್ತದೆ. ಇದಕ್ಕೆ ಕಾರಣ ಅವರಿಗೆ ದೇವರ ಮೇಲೆ ಭಕ್ತಿ ಇಲ್ಲದೇ ಇರುವುದು. ಆದರೆ ಭಕ್ತನ ಉತ್ಸಾಹ ಎಲ್ಲಾ ಸಂದರ್ಭಗಳಲ್ಲೂ ಇರುತ್ತದೆ. ಅದಕ್ಕಾಗಿ ನಮ್ಮ ಮನಸ್ಸಿನಲ್ಲಿ ನಾಸ್ತಿಕ ಭಾವಗಳು ಬರದೆ ಇರುವ ಹಾಗೆ, ಭಕ್ತಿಯ ಭಾವ ಜಾಗೃತವಾಗಿ ಇರಲು ಆಗಾಗ ಪ್ರಯತ್ನ ಮಾಡುತ್ತಲೇ ಇರಬೇಕು. ಜೀವನೋತ್ಸಾಹವನ್ನು ಕಳೆದುಕೊಳ್ಳದೇ ಮುಂದೆ ಹೋಗುತ್ತಿರುತ್ತಾನೋ ಅವನು ಮರಣದಲ್ಲೂ ಕೂಡಾ ಉತ್ಸಾಹವನ್ನು ಕಳೆದುಕೊಳ್ಳುವುದಿಲ್ಲ ಎಂದರು. ಮರವನ್ನು ಉತ್ಸಾಹದಿಂದಲೇ ಸ್ವೀಕರಿಸುತ್ತಾನೆ. ಇದಕ್ಕೆ ಎಲ್ಲಾ ಮಹಾತ್ಮರು ಉದಾಹರಣೆಗಳು. ಅವರು ಜೀವನವಿಡೀ ಉತ್ಸಾಹದಿಂದಲೇ ಕಳೆದು ಅನಂತರ ಮರಣವನ್ನೂ ಕೂಡ ಅಷ್ಟೇ ಉತ್ಸಾಹದಿಂದ ಸ್ವೀಕರಿಸಿದರು. ಭಕ್ತಿಯ ಉತ್ಸಾಹದಿಂದ ಕಳೆದವರು. ಜೀವನದ ಅಂತಿಮ ಕ್ಷಣದಲ್ಲೂ ಅವರು ಉತ್ಸಾಹವನ್ನು ಕಳೆದುಕೊಳ್ಳುವುದಿಲ್ಲ. ಉಳಿದವರು ನಗುತ್ತಾ ಇರುವಾಗ ನೀನು ಅಳುತ್ತಾ ಹೊರಬಂದೆ. ಈಗ ಹೋಗಬೇಕಾದರೆ ಉಳಿದವರು ಅಳುತ್ತಾ ಇರುವಾಗ ನೀನು ನಗುನಗುತ್ತಾ ಹೋಗಬೇಕು. ಮರಣದಲ್ಲೂ ಉತ್ಸಾಹವು ದೇವರಮೇಲಿನ ಭಕ್ತಿಯಿಂದ ಮಾತ್ರ ಬರಲು ಸಾಧ್ಯ. ಭಕ್ತಿಯ ಮೂಲಕ ಉತ್ಸಾವನ್ನು ಉದ್ದೀಪನ ಗೊಳಿಸುತ್ತಿರಬೇಕು. ಉತ್ಸಾಹವು ಕುಸಿಯದಿರುವ ಹಾಗೆ ನೋಡಿಕೊಳ್ಳಬೇಕು. ಭಗವಂತನು ಉತ್ಸಾಹದ ಸ್ವರೂಪ. ಮರಣ ಎಂಬ ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ಆಗುತ್ತದೆ. ಆದರೆ ಈ ಪ್ರಕ್ರಿಯೆ ಸರಿಯಾಗಿ ಆಗಬೇಕು ಎಂದರೆ ಜೀವನವಿಡೀ ಸಾಧನೆಯನ್ನು ಸರಿಯಾಗಿ ಮಾಡಬೇಕು. ಭಕ್ತಿಯ ಮೂಲಕ ಜೀವನೋತ್ಸಾಹವನ್ನು ಗಟ್ಟಿ ಗೊಳಿಸಿಕೊಂಡವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ, ಜೀವನದ ಕೊನೆಯ ಪರೀಕ್ಷೆಯಾದ ಮರಣವನ್ನು ಸುಲಭವಾಗಿ ದಾಟುತ್ತಾರೆ, ಉತ್ತಮವಾದ ಗತಿಯನ್ನು ಹೊಂದುತ್ತಾರೆ ಎಂದರು ಹಾಗಾಗಿ ಜೀವನೋತ್ಸಾಹವನ್ನು ಗಟ್ಟಿಗೊಳಿಸಲು ಉತ್ಸಾಹದ ಬುಗ್ಗೆಯಾಗಿರುವ ಪರಮಾತ್ಮನನ್ನು ಭಕ್ತಿಯಿಂದ ಗಟ್ಟಿಯಾಗಿ ಹಿಡಿದುಕೊಳ್ಳಬೇಕು ಎಂದರು.

ಆನಂದವೇ ಗುರಿ;
ಈ ಪ್ರಪಂಚದಲ್ಲಿ ಸೃಷ್ಟಿ ಗೊಂಡತಹ ಎಲ್ಲಾ ಜೀವಿಗಳ ಗುರಿ ಆನಂದವನ್ನು ಪಡೆದುಕೊಳ್ಳಬೇಕು ಎಂದೇ ಆಗಿದೆ ಎಂದು ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು. ಎಷ್ಟೇ ಪ್ರಯತ್ನ ಪಟ್ಟರೂ ಸಂಪೂರ್ಣವಾದ ಆನಂದ ಸಿಗಲಿಲ್ಲ ಎಂಬ ಭಾವನೆ ಇರುತ್ತದೆ. ಅದಕ್ಕಾಗಿ ಭಿನ್ನ ಭಿನ್ನ ಮಾರ್ಗಗಳನ್ನು ಅನುಸರಿಸುತ್ತಾರೆ. ಶಾಶ್ವತವಾದ ಆನಂದವನ್ನು ಕಂಡುಕೊಳ್ಳಲು ಪ್ರಧಾನವಾದ ಮಾರ್ಗ ಎಂದರೆ ಅದು ಭಕ್ತಿ ಮಾರ್ಗ ಎಂದರು. ಪರಮಾತ್ಮನನ್ನು ಅನನ್ಯವಾಗಿ ಪ್ರೀತಿಸುವುದು. ಅಮೃತ ಸದೃಶವಾಗಿ ಇರುತ್ತದೆ. ಅದನ್ನು ಪಡೆದವನು ಅಮೃತ ಸದೃಶವಾಗುತ್ತಾನೆ. ಇಂತಹ ಭಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಸುಲಭವಾದ ಉಪಾಯವೆಂದರೆ ಅದು ಗುರುಭಕ್ತಿ. ಧಾನ್ಯ ಮಾಡಲಿಕ್ಕೆ ಅತ್ಯಂತವಾದ ಪ್ರಶಸ್ತವಾದ ಮೂರ್ತಿಯೆಂದರೆ ಅದು ಗುರುಗಳದ್ದು ಎಂದರು. ಗುರುಭಕ್ತಿಯಿಂದ ನಾವು ನಮಗೆ ಬೇಕಾದ ಆನಂದವನ್ನು ಪಡೆಯಲು ಸಾಧ್ಯ. ಗುರುವಿನ ಆಜ್ಞೆಯನ್ನು ಪಾಲನೆ ಮಾಡುತ್ತಾ ಗುರುಗಳ ಸೇವೆ ಮಾಡಿ ಅವರನ್ನು ಮನಸ್ಸಿನಲ್ಲಿ ಧ್ಯಾನಿಸಬೇಕು. ಅವರ ಮೇಲೆ ಭಕ್ತಿ ಶ್ರದ್ಧೆಯಿಂದ ಗುರು ಸೇವಾ ತಪಸ್ಸನ್ನು ಆಚರಿಸಬೇಕು. ಅದರ ಮೂಲಕ ನಾವು ಆನಂದದ ಕಡೆಗೆ ಹೋಗುವ ಪ್ರಯತ್ನ ಮಾಡಬೇಕು ಎಂದರು.
ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಿಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಸೀಮೆಯ ಪ್ರಮುಖರಾದ ಕೇಶವ ಹೆಗಡೆ ಗಡಿಕೈ, ಮಹಾಬಲೇಶ್ವರ ಹೆಗಡೆ ಗಡಿಕೈ, ವಸಂತ ಹೆಗಡೆ ದೊಡ್ಡುರು, ಆರ್. ಎಸ್. ಹೆಗಡೆ ಭೈರುಂಬೆ ಇತರರು ಇದ್ದರು.

Share This
300x250 AD
300x250 AD
300x250 AD
Back to top