ದಾಂಡೇಲಿ : ನಗರದ ನೀರು ಸರಬರಾಜಿನ ಮುಖ್ಯ ಪೈಪ್ ಲೈನ್ ದುರಸ್ತಿ ಕಾರ್ಯದ ನಿಮಿತ್ತ ಆ.19 ರಿಂದ ಬುಧವಾರದವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಕಳೆದ ಮೂರು ದಿನಗಳಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರೂ, ಈ ನಿಟ್ಟಿನಲ್ಲಿ ಸಹಕರಿಸಿದ ನಗರದ ಸರ್ವ ಜನತೆಗೆ ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಅವರು ಬುಧವಾರ ಸಂಜೆ ನಗರ ಸಭೆಯಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಹಕಾರದಲ್ಲಿ, ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ವಿಶೇಷವಾಗಿ ನೀರಾವರಿ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿಶೇಷ ಸಹಕಾರದಲ್ಲಿ ನೀರು ಸರಬರಾಜಿನ ಮುಖ್ಯ ಪೈಪ್ ಲೈನ್ ದುರಸ್ತಿ ಕಾರ್ಯವು ಯಶಸ್ವಿಯಾಗಿ ನಡೆದಿದೆ. ರಾತ್ರಿ ಹಗಲೆನ್ನದೆ ಸುದೀರ್ಘ 48 ಗಂಟೆಗಳ ದುರಸ್ತಿ ಕಾರ್ಯದಲ್ಲಿ ನೀರಾವರಿ ವಿಭಾಗದ ಕಾರ್ಮಿಕರು ಶ್ರದ್ಧೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರೂ, ನಗರದ ಜನತೆ ನಗರಸಭೆಯ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಬುಧವಾರ ಸಂಜೆಯಿಂದಲೇ ಟ್ಯಾಂಕ್ ಗಳಿಗೆ ನೀರು ತುಂಬಿಸುವ ಪ್ರಕ್ರಿಯೆ ಆರಂಭವಾಗಿದೆ. ಅದಾದ ಬಳಿಕ ಎಂದಿನಂತೆ ಸುಲಲಿತವಾಗಿ ನೀರು ಪೂರೈಕೆಯಾಗಲಿದೆ ಎಂದು ಆರ್.ಎಸ್.ಪವಾರ್ ಅವರು ತಿಳಿಸಿದ್ದಾರೆ.