ದಾಂಡೇಲಿ : ದಾಂಡೇಲಿಯ ಡಾಲರ್ಸ್ ಕಾಲೋನಿಯಂತಿರುವ ನಗರದ ಟೌನ್ ಶಿಪ್ ನಲ್ಲಿರುವ ಟ್ರ್ಯಾಂಗಲ್ ಗಾರ್ಡನ್ ಹತ್ತಿರದ ರಸ್ತೆಯ ಬದಿಯಲ್ಲಿ ಬೆಳೆದು ನಿಂತ ಮರಗಳ ಟೊಂಗೆಗಳು ಆತಂಕಕಾರಿಯಾಗಿದೆ. ಇಲ್ಲಿ ಸರತಿಯ ಸಾಲಿನಲ್ಲಿ ಬೆಳೆದು ನಿಂತ ಮರಗಳಿದ್ದು, ಬಹುತೇಕ ಎಲ್ಲ ಮರಗಳ ಟೊಂಗೆಗಳು ಮಾತ್ರ ಜೀವ ಹಾನಿಯನ್ನು ಬಯಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇತ್ತೀಚೆಗಷ್ಟೇ ಇಲ್ಲಿನ ನಿವಾಸಿ ಫಿರೋಜ್ ಅವರ ಮನೆ ಮುಂಭಾಗದಲ್ಲಿ ನಿಲ್ಲಿಸಿಟ್ಟಿದ್ದ ಕಾರಿನ ಮೇಲೆ ಮರದ ಟೊಂಗೆ ಬಿದ್ದು ಸುಮಾರು 20 ರಿಂದ 25 ಸಾವಿರ ರೂಪಾಯಿ ನಷ್ಟ ಸಂಭವಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನೂ ಇದೇ ರಸ್ತೆಯ ಮುಂದೆ ಸೇಂಟ್ ಮೈಕಲ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆ ಇತ್ತು ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲೆಗೆ ಹೋಗಿ ಬರುವುದು ಸಾಮಾನ್ಯ. ಇನ್ನೂ ಇಲ್ಲಿ ಯಥೇಚ್ಛ ಮರಗಳು ಇರುವುದರಿಂದ ಕೋತಿಗಳ ಆಟ ಮಾತ್ರ ಸ್ಥಳೀಯ ಜನತೆಗೆ ಪ್ರಾಣಸಂಕಟವಾಗಿದೆ.
ಶಾಲಾ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಏನಾದರೂ ಮರದ ಕೊಂಬೆಗಳು ಮುರಿದು ಬಿದ್ದರೆ ಅನಾಹುತ ತಪ್ಪಿದ್ದಲ್ಲ. ಇನ್ನೂ ಸ್ಥಳೀಯ ಜನತೆಯು ಪ್ರತಿನಿತ್ಯವೂ ಜೀವಭಯದಲ್ಲೇ ದಿನ ಕಳೆಯುವ ಸ್ಥಿತಿ ಈ ಮರಗಳ ಟೊಂಗೆಗಳಿಂದ ನಿರ್ಮಾಣವಾಗಿದೆ.
ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಮರಗಳ ಟೊಂಗೆಗಳನ್ನು ತೆರೆವುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸ್ಥಳೀಯ ಜನತೆ ಮಾಧ್ಯಮದ ಮೂಲಕ ಮಂಗಳವಾರ ಮನವಿಯನ್ನು ಮಾಡಿದ್ದಾರೆ.