ಭಟ್ಕಳ: ಅನಧೀಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಮಾನದಂಡ 2015ಕ್ಕೆ ನಿಗದಿಗೊಳಿಸಿ ಇತ್ತೀಚಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹೊರಡಿಸಿದ ಟಿಪ್ಪಣಿಯು ಸುಪ್ರೀಂ ಕೋರ್ಟ ಆದೇಶ ಮತ್ತು ಕಾನೂನು ಉಲ್ಲಂಘನೆ ಆಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಅವರು ಭಟ್ಕಳ ತಾಲೂಕಿನ ಅರಣ್ಯವಾಸಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶದಲ್ಲಿಂದು ಅರಣ್ಯ ಸಂರಕ್ಷಣಾ ಕಾಯಿದೆ 1980 ಅಡಿಯಲ್ಲಿ 1978 ರ ನಂತರ ಹಾಗೂ ಅರಣ್ಯ ಹಕ್ಕು ಕಾಯಿದೆಯಂತೆ ಡಿಸೆಂಬರ್ 13, 2005ರ ನಂತರ ಅತಿಕ್ರಮಣ ಮಂಜೂರಿಗೆ ನಿರ್ಬಂಧವಿದೆ. ಇದನ್ನು ಸುಪ್ರೀಂ ಕೋರ್ಟ ಸಹಿತ ನಿರ್ಬಂಧಿಸಿದೆ. ಆದರೆ, ಆಗಸ್ಟ್ 2ರ ಸಚಿವರ ಟಿಪ್ಪಣಿಯಂತೆ 2015 ರವರೆಗಿನ ಅವಧಿಗೆ ಯಾವುದೇ ಅತಿಕ್ರಮಣ ಮಾಡಲು ಕಾನೂನಲ್ಲಿ ಮಾನ್ಯತೆ ಇಲ್ಲ. ಹೀಗಾಗಿ ಅರಣ್ಯ ಸಚಿವರ ಟಿಪ್ಪಣಿಯು ಕಾನೂನು ಉಲ್ಲಂಘನೆ ಆಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಪದಾಧಿಕಾರಿಗಳಾದ ಪಾಂಡು ನಾಯ್ಕ ಬೆಳಕೆ, ದೇವರಾಜ ಗೊಂಡ, ಮಂಜುನಾಥ ಮರಾಠಿ, ಶಬ್ಬಿರ್, ಚಂದ್ರು ನಾಯ್ಕ ಗೊರಟೆ, ದೇವೇಂದ್ರ ಮರಾಠಿ ಹೆಜ್ಜಿಲು, ಕಯುಂ ಕೊಲ, ಎಸ್ ಕೆ ಮನ್ಸೂರ್, ಚೇತನ ಮರಾಠಿ ಮುಂತಾದವವರು ಸಭೆಯಲ್ಲಿ ಮಾತನಾಡಿದರು.
ಅರಣ್ಯ ವಾಸಿಗಳ ಸಮಸ್ಯೆಗಳಿಗೆ ನಿರಂತರ ೩೩ ವರ್ಷದ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ಸಂಘಟನಾ ಬಲ ಹೆಚ್ಚಿಸುವ ನಿರ್ಣಯ ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.