ರಂಗಭೂಮಿಗೆ ಕೊಡುಗೆ ನೀಡಿದ ಗಿರಿಜಾ ಸಿದ್ದಿ, ಕಲಾವಿದ ಸುರೇಶ ಸಿದ್ದಿಗೆ ಪ್ರಶಸ್ತಿ ಪ್ರಕಟ
ಶ್ರೀಧರ ವೈದಿಕ
ಯಲ್ಲಾಪುರ: ತಾಲೂಕಿನ ಮಂಚಿಕೇರಿ ಭಾಗದ ಬುಡಕಟ್ಟು ಜನಾಂಗದ ಇಬ್ಬರು ರಂಗಭೂಮಿ ಕಲಾವಿದರು ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಂಗಭೂಮಿಯ ನಟಿ, ನಿರ್ದೇಶಕಿ ಹಾಗೂ ಗಾಯಕಿ ಅಣಲೇಸರದ ಗಿರಿಜಾ ಸಿದ್ದಿ ಮತ್ತು ಬಾಚನಳ್ಳಿಯ ಕಲಾವಿದ ಸುರೇಶ ರಾಮಚಂದ್ರ ಸಿದ್ದಿ ಅವರಿಗೆ ಅಕಾಡೆಮಿ ಪ್ರಶಸ್ತಿ ಘೋಷಿಸಿದೆ.
ಬಹುಮುಖ ಪ್ರತಿಭೆಯ ಗಿರಿಜಾ:
ಮಂಚಿಕೇರಿ ಅಣಲೇಸರದ ಗಿರಿಜಾ ಸಿದ್ದಿ ರಂಗಭೂಮಿ ಹಾಗೂ ಜಾನಪದ ಕಲಾವಿದ ಪರಶುರಾಮ ಸಿದ್ದಿ ಅವರ ಪುತ್ರಿ. ಸಿದ್ದಿ ಸಮುದಾಯದ ಪುಗಡಿ, ಡಮಾಮಿ ನೃತ್ಯದ ಹಿನ್ನೆಲೆ, ಜತೆಗೆ ಮಂಚಿಕೇರಿಯ ಸಂಗೀತ, ರಂಗಭೂಮಿ, ಯಕ್ಷಗಾನ, ಸಣ್ಣಾಟದ ವಾತಾವರಣದ ಕಾರಣದಿಂದ ಬಾಲ್ಯದಿಂದಲೇ ಕಲೆಗಳ ಕುರಿತು ಆಸಕ್ತಿ ಹೊಂದಿದ್ದರು. ಪ್ರೌಢಶಾಲೆಯಲ್ಲಿರುವಾಗಲೇ ರಾಜರಾಜೇಶ್ವರಿ ರಂಗವಿಭಾಗದ ತಂಡದಲ್ಲಿ ವೆಂಕಟರಮಣ ಐತಾಳ ನಿರ್ದೇಶನದ ಬೆಟ್ಟದ ಅರಸು ನಾಟಕದ ಚಂದವ್ವೆಯಾಗಿ, ರಘುನಂದ ನಿರ್ದೇಶನದ ಮಂತ್ರಶಕ್ತಿ, ಸತ್ತವರ ಕಥೆಯಲ್ಲ ನಾಟಕದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.
ನಂತರ ನೀನಾಸಂನಲ್ಲಿ ರಂಗಶಿಕ್ಷಣ ಪಡೆದು, ಅಲ್ಲಿ ರಂಗ ಶಿಕ್ಷಣ ಪಡೆದ ಸಿದ್ದಿ ಸಮುದಾಯದ ಮೊದಲ ಹೆಣ್ಣು ಎಂಬ ಖ್ಯಾತಿ ಪಡೆದರು. ಎರಡು ವರ್ಷ ನಿನಾಸಂನಲ್ಲಿ ನಟಿಯಾಗಿ, ವಸ್ತ್ರ ವಿನ್ಯಾಸಕಿಯಾಗಿ, ಹಿನ್ನೆಲೆ ಗಾಯಕಿಯಾಗಿ ಕಾರ್ಯನಿರ್ವಹಿಸಿದರು. ಪತಿ ಚೆನ್ನಕೇಶವ ಅವರೊಂದಿಗೆ ಹಲವು ನಾಟಕಗಳಿಗೆ ರಂಜಸಜ್ಜಿಕೆ, ಪ್ರಸಾಧನ, ಸಂಗೀತ, ಪರಿಕರ ಸಹಕಾರ ನೀಡಿದ್ದಾರೆ. ರಾಜ್ಯದ ಪ್ರತಿಷ್ಠಿತ ರಂಗ ಸಂಸ್ಥೆಗಳಲ್ಲಿ, ಹೆಸರಾಂತ ನಿರ್ದೇಶಕರ ನಿರ್ದೇಶನದಲ್ಲಿ ನಟಿಯಾಗಿ, ಗಾಯಕಿಯಾಗಿ ಅಸಂಖ್ಯ ನಾಟಕಗಳಲ್ಲಿ ಭಾಗವಹಿಸಿದ್ದಾರೆ. ಅಮೆರಿಕಾ, ದುಬೈಗಳಲ್ಲಿಯೂ ನಾಟಕ ಪ್ರದರ್ಶನ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿ, ಭಾರತೀಯ ಸಂಗೀತ ವಿದ್ಯಾಭವನದಲ್ಲಿ ಸಂಗೀತದ 5 ವರ್ಷಗಳ ಡಿಪ್ಲೊಮಾ ಶಿಕ್ಷಣ ಪೂರೈಸಿದ್ದಾರೆ. ಲೋಕಚರಿತ ಬೆಂಗಳೂರು, ಸಿದ್ದಿ ಟ್ರಸ್ಟ್ ದೇವರಕಲ್ಲಳ್ಳಿ ತಂಡದ ಸದಸ್ಯರಾಗಿ ರಂಗಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟು, ಹಿನ್ನೆಲೆ ಗಾಯಕಿಯಾಗಿ ಗಿರಿಜಾ ಪ್ರಸಿದ್ಧರಾಗಿದ್ದಾರೆ. ದುನಿಯಾ ವಿಜಯ್ ಅವರ ಸಲಗ ಚಿತ್ರ, ಪ್ರಿಯಾಂಕಾ ಉಪೇಂದ್ರ ನಟನೆಯ ಉಗ್ರಾವತಾರ ಹಾಗೂ ಇತ್ತೀಚೆಗೆ ತೆರೆಕಂಡ ಬ್ಲಿಂಕ್ ಚಿತ್ರದಲ್ಲಿ ಹಾಡಿದ್ದಾರೆ. ಸಲಗ ಚಿತ್ರದ ‘ಟಿಣಿಂಗ್ ಮಿಣಿಂಗ್ ಟಿಶ್ಯಾ’ ಹಾಗೂ ಉಗ್ರಾವತಾರದ ‘ಬರ್ತಾಳ್ ಬರ್ತಾಳ್’ ಎಂಬ ಹಾಡಿಗೆ ಉತ್ತಮ ಗಾಯಕಿ ಪ್ರಶಸ್ತಿ ದೊರೆತಿದೆ. ಸದ್ಯ ಬೆಂಗಳೂರಿನ ಯಶವಂತಪುರದಲ್ಲಿ ತಮ್ಮದೇ ಆದ ಕಿರು ರಂಗಮಂದಿರದಲ್ಲಿ ರಂಗಚಟುವಟಿಕೆಗಳೊಂದಿಗೆ ಮಕ್ಕಳಿಗೆ ಶಾಸ್ತ್ರೀಯ ಸಂಗೀತ ಹೇಳಿಕೊಡುತ್ತಿದ್ದಾರೆ.
ಸುರೇಶ ಸಿದ್ದಿ:
ಸುರೇಶ ರಾಮಚಂದ್ರ ಸಿದ್ದಿ ಮಂಚಿಕೇರಿ ಸಮೀಪದ ಬಾಚನಳ್ಳಿಯವರು. ತಂದೆ ಸಣ್ಣಾಟದ ಕಲಾವಿದರಾಗಿರುವುದರಿಂದ ಸಹಜವಾಗಿ ಕಲೆಯ ಕುರಿತು ಆಸಕ್ತಿ ಮೊಳೆಯಿತು. ಸಣ್ಣಾಟದ ಭಾಗವತರಾಗಿದ್ದ ಸೋದರಮಾವ ಬಾಬು ಸಿದ್ದಿ ಅವರಿಂದ ಸಣ್ಣಾಟದ ಹೆಜ್ಜೆ, ಭಾಗವತಿಕೆ, ವಾದನ ಕಲಿತರು. ಆರ್ಥಿಕ ಸಮಸ್ಯೆಯ ಕಾರಣದಿಂದ ಶಿಕ್ಷಣ ವಂಚಿತರಾದ ಸುರೇಶ, ಕೃಷಿಯೊಂದಿಗೆ ಸಂಗ್ಯಾ ಬಾಳ್ಯಾ ಸಣ್ಣಾಟದ ನಟರಾಗಿ, ಭಾಗವತರಾಗಿ ತೊಡಗಿಸಿಕೊಂಡರು. ತಾಲೂಕಿನ ನೂರಾರು ಕಡೆಗಳಲ್ಲಿ ಸಣ್ಣಾಟದ ಕಲಾವಿದರಾಗಿ, ಭಾಗವತರಾಗಿ ಪ್ರದರ್ಶನ ನೀಡಿದ್ದಾರೆ.
ಮಂಚಿಕೇರಿಯ ಆರ್.ಎನ್.ಭಟ್ಟ ದುಂಡಿ ಅವರ ನೇತೃತ್ವದ ರಾಜರಾಜೇಶ್ವರಿ ರಂಗವಿಭಾಗ, ರಂಗಸಮೂಹ, ಸಿದ್ದಿ ಟ್ರಸ್ಟ್ ಮುಂತಾದ ತಂಡಗಳ ನಾಟಕಗಳಲ್ಲಿ ಕಲಾವಿದರಾಗಿ, ವಾದ್ಯಗಾರರಾಗಿ ಭಾಗವಹಿಸಿದ್ದಾರೆ. ಹವ್ಯಾಸಿ ರಂಗಭೂಮಿಯ ನಟರಾಗಿ, ವಾದ್ಯಗಾರರಾಗಿ ಚಿದಂಬರರಾವ ಜಂಬೆ, ವೆಂಕಟರಮಣ ಐತಾಳ ಸೇರಿ ಅನೇಕ ಪ್ರಸಿದ್ಧ ನಿರ್ದೇಶಕರ ನಾಟಕಗಳಲ್ಲಿ ಭಾಗವಹಿಸಿದ್ದಾರೆ. ಡಮಾಮಿ ವಾದಕರಾಗಿ ರಾಜ್ಯದ ಹಲವೆಡೆ ಕಲಾ ಪ್ರದರ್ಶನ ನೀಡಿರುವ ಸುರೇಶ ಅವರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಶುರಾಮ ಸಿದ್ದಿ ಅವರ ತಂಡದ ಪ್ರಮುಖ ಡಮಾಮಿ ವಾದಕರಾಗಿದ್ದಾರೆ.
ಈಗಲೂ ಕೃಷಿಯೊಂದಿಗೆ ಹವ್ಯಾಸಿಯಾಗಿ ರಂಗ ಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷ ಕೃಷಿ ಕಾರ್ಯಗಳು ಮುಗಿಯುತ್ತಿದ್ದಂತೆ ನಾಟಕಗಳಿಗೆ ಆಹ್ವಾನ ದೊರೆಯುತ್ತದೆ. ಡಮಾಮಿ, ತಾಳ ಹಿಡಿದು ರಂಗಭೂಮಿಯತ್ತ ಸಾಗುತ್ತಾರೆ.