ಸಂದೇಶ್ ಎಸ್.ಜೈನ್
ದಾಂಡೇಲಿ: ಅದು ದಾಂಡೇಲಿ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶವಿರುವ ರಸ್ತೆ. ಈ ರಸ್ತೆಯಲ್ಲಿ ನಗರದ ಜನತೆ ಮಾತ್ರವಲ್ಲದೆ ದೂರದೂರುಗಳಿಂದ ಬರುವ ಪ್ರವಾಸಿಗರು ಕೂಡ ಸಂಚರಿಸುತ್ತಾರೆ.
ಅಂದ ಹಾಗೆ ಇದು ನಗರದ ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಲಿಂಕ್ ರಸ್ತೆ. ನಗರದ ಜನತೆಯ ದೈನಂದಿನ ಬದುಕಿಗೆ ಈ ರಸ್ತೆ ಒಂದಲ್ಲ ಒಂದು ರೀತಿಯಲ್ಲಿ ತನ್ನ ಲಿಂಕನ್ನು ಹೊಂದಿದೆ. ಎಲ್ಲಾ ವೆರೈಟಿಗಳ ಅಂಗಡಿಗಳು ಇಲ್ಲಿವೆ, ಹೋಟೆಲ್‌ಗಳು ಕೂಡ ಇಲ್ಲಿವೆ, ಗಿರಣಿಯು ಇದೆ, ಮದರಸನೂ ಇದೆ, ಆಂಜನೇಯ ಮಂದಿರವು ಈ ರಸ್ತೆಯಲ್ಲಿ ಸಿಗುತ್ತದೆ.
ಇಂತಹ ಪ್ರಮುಖ ವಾಣಿಜ್ಯ ರಸ್ತೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬಿಡಾಡಿ ದನವೊಂದು ಸಾರ್ವಜನಿಕರಿಗೆ ಪ್ರತಿನಿತ್ಯ ತೊಂದರೆಯನ್ನು ಕೊಡುತ್ತಾ ಬಂದಿದೆ. ಸಾರ್ವಜನಿಕರನ್ನು ಅಟ್ಟಾಡಿಸಿ, ಅದರ ಕೊಂಬಲ್ಲಿ ಹಲ್ಲೆ ಮಾಡಲು ಯತ್ನಿಸುವುದು. ಸಾರ್ವಜನಿಕರ ಕೈಯಲ್ಲಿರುವ ಚೀಲಗಳನ್ನು ಎಳೆಯುವುದು, ಸಾರ್ವಜನಿಕರನ್ನು ಓಡಿಸುವುದು, ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಕೊಡುವುದು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕಾಟವನ್ನು ಕೊಡುತ್ತಲೇ ಇದೆ. ಇತ್ತೀಚಿನ ಕೆಲ ದಿನಗಳ ಹಿಂದೆ ಉಮೇಶ ಸಾವಳಿಗಮಠ ಹಾಗೂ ದಾಸಪ್ಪ ಬಂಡಿವಡ್ಡರ ಎಂಬಿಬ್ಬರನ್ನು ಅಟ್ಟಾಡಿಸಿ ತಿವಿಯಲು ಹೋಗಿದ್ದ ಈ ದನದಿಂದ ಅವರಿಬ್ಬರು ಅದೃಷ್ಟವಶಾತ್ ಪಾರಾಗಿ ಬಂದಿದ್ದಾರೆ. ಇದು ಹೀಗೇನೆ ಮುಂದುವರೆದರೆ, ಈ ರಸ್ತೆಯಲ್ಲಿ ಹೋಗುವ ಸಾರ್ವಜನಿಕರ ಮತ್ತು ವಾಹನ ಸವಾರರ ಜೀವಕ್ಕೆ ಬಹುದೊಡ್ಡ ಅಪಾಯ ಸಂಭವಿಸುವ ಸಾಧ್ಯತೆಯಿದೆ.
ಜೀವ ಹೋದ ನಂತರ ಕ್ರಮ ಕೈಗೊಳ್ಳುವ ಬದಲು, ಕೂಡಲೇ ಈ ದನವನ್ನು ಹಿಡಿದು ದುಸಗಿಯಲ್ಲಿರುವ ಗೋಶಾಲೆಗೆ ಕಳುಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.