ಶಿರಸಿ: ತಾಲೂಕ ಆಡಳಿತ ಶಿರಸಿ ಹಾಗೂ ಭಾರತ ಸೇವಾದಳ ಶಿರಸಿ ಶೈಕ್ಷಣಿಕ ಜಿಲ್ಲಾ ಹಾಗೂ ತಾಲೂಕ ಸಮಿತಿ ಶಿರಸಿ ಆಶ್ರಯದಲ್ಲಿ ಆ.8ರಂದು ಭಾರತ ಸೇವಾದಳ ಜಿಲ್ಲಾಕಛೇರಿ ಶಿರಸಿ ಇಲ್ಲಿ ರಾಷ್ಟ್ರಧ್ವಜ ಮಾಹಿತಿ ಶಿಬಿರವನ್ನು ನಡೆಸಲಾಯಿತು. ತಾಲೂಕ ಮಟ್ಟದ ಅಧಿಕಾರಿಗಳಿಗೆ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ನಡೆಸಿದ ಈ ಶಿಬಿರವನ್ನು ಮಾನ್ಯ ಸಹಾಯಕ ಆಯುಕ್ತರಾದ ಶ್ರೀಮತಿ ಕಾವ್ಯರಾಣಿ ಕೆ.ವಿ. ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನಂತರ ಪ್ರಾತ್ಯಕ್ಷಿಕೆಯಾಗಿ ಧ್ವಜವಂದನೆ ನೆರವೆರಿಸಿ ಶುಭ ಕೋರುತ್ತಾ ರಾಷ್ಟ್ರಧ್ವಜದ ಮಾಹಿತಿಯನ್ನು ಎಲ್ಲರೂ ತಿಳಿದುಕೊಳ್ಳುವುದು ಅತೀ ಅವಶ್ಯ. ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದು ಧ್ವಜ ಕಟ್ಟುವ ಮಾಹಿತಿಯನ್ನು ಅಧಿಕಾರಿಗಳಾದ ನಾವು ಅರಿತಿರಬೇಕು ಎಂದು ಮಾಹಿತಿಯನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾನ್ಯ ತಹಶೀಲ್ದಾರ ಶ್ರೀಧರ ಮುಂದಲಮನಿ ಮಾತನಾಡುತ್ತಾ ಈ ರಾಷ್ಟ್ರಧ್ವಜ ಮಾಹಿತಿ ಶಿಬಿರ ಅತೀ ಅವಶ್ಯ. ಧ್ವಜ ಕಟ್ಟುವ ತರಬೇತಿ ಎಲ್ಲರಿಗೂ ಸಿಗುವಂತಗಾಬೇಕು. ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ಸಮರ್ಪಕವಾಗಿ ನೆರವೇರಲಿ. ಸಣ್ಣ ಪುಟ್ಟ ತಪ್ಪುಗಳು ಆಗದಂತೆ ಜಾಗೃತೆ ವಹಿಸಿ ಎಂದು ಸಲಹೆ ನೀಡಿದರು. ಭಾರತ ಸೇವಾದಳ ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ರಾಷ್ಟ್ರಧ್ವಜದ ಮಾಹಿತಿ ಪ್ರಾತ್ಯಕ್ಷಿಕೆಯಾಗಿ ಧ್ವಜ ವಂದನೆ, ಧ್ವಜ ಕಟ್ಟುವ ವಿಧಾನ, ಧ್ವಜ ಅವರೋಹಣ ವಿಧಾನಗಳನ್ನು ತಿಳಿಸಿಕೊಟ್ಟರು. ಗೌರವ ರಕ್ಷೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ ಹಾಡಲಾಯಿತು. ಭಾರತ ಸೇವಾದಳ ಜಿಲ್ಲಾಕಾರ್ಯದರ್ಶಿಗಳಾದ ಪ್ರೋ. ಕೆ.ಎನ್. ಹೊಸಮನಿ ಪ್ರಾಸ್ಥಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.