ಶಿರಸಿ: ಶಿರಸಿ ರೋಟರಿ ಸದಸ್ಯರು ತಾವು ದುಡಿದ ಹಣದ ಭಾಗದ ಜೊತೆಗೆ ಸಮಯವನ್ನೂ ಕೊಟ್ಟು ಸಮಾಜಸೇವೆ ಮಾಡುತ್ತಿರುವುದು ಸ್ತುತ್ಯಾರ್ಹ. ಅವರ ಕ್ರಿಯಾಶೀಲತೆ ನಮಗೆಲ್ಲರಿಗೆ ಸ್ಪೂರ್ತಿ. ಈ ಗೌರವದ ಭಾರಕ್ಕೆ ಅಭಾರಿ ಎಂದು ಹಿರಿಯ ಪತ್ರಕರ್ತ, ಮಾದ್ಯಮ ಶ್ರೀ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಬೆಟ್ಟಕೊಪ್ಪ ಹೇಳುದರು.
ಅ.3ರಂದು ಶಿರಸಿ ರೋಟರಿ ಕ್ಲಬ್ ಪತ್ರಿಕಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಶ್ರೀಧರ ಮಂಗಳೂರು ಮಾತನಾಡಿ, ಪತ್ರಕರ್ತರಾದ ನಮಗೆ ಬರೆಯುವುದೇ ಕಾಯಕ ಕರ್ಮ. ಒಳಿತನ್ನು ಗುರುತಿಸಿ, ಗೌರವಿಸಿ ಪೋಷಿಸುತ್ತ ಸಲ್ಲದ ಸಂಗತಿಗಳನ್ನು ಖಂಡಿಸುತ್ತ ಉತ್ತಮ ಸಮಾಜ ನಿರ್ಮಿತಿಗೆ ಪತ್ರಿಕೆಗಳು ಶ್ರಮಿಸಬೇಕು. ಕಾರಣಾಂತರಗಳಿಂದ ಈ ರಂಗದಲ್ಲೂ ಬದಲಾವಣೆ ಕಂಡುಬರುತ್ತಿದ್ದಲ್ಲಿ ಅದು ಕೂಡ ಓದುಗ ಸಮಾಜದ ಸ್ಪಂದನೆ, ಅಭಿರುಚಿಯನ್ವಯವೇ ಆಗಿದ್ದಿರುತ್ತದೆ. ಆದುದರಿಂದ ಪತ್ರಿಕಾರಂಗದಲ್ಲೂ ಸೂಕ್ತ ಬದಲಾವಣೆ ತರಬೇಕಾದ ಜವಾಬ್ದಾರಿಯೂ ಸಮಾಜಕ್ಕಿದೆ.
ಶಿರಸಿ ರೋಟರಿ ಸದಾ ಅತ್ಯತ್ತಮ ಸಮಾಜಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದನ್ನು ಗಮನಿಸಿದ್ದು ಅದನ್ನು ಸುದ್ದಿ ಪ್ರಕಟಣೆಯ ಮೂಲಕ ನಾವು ಬೆಂಬಲಿಸುತ್ತಲೇ ಬಂದಿದ್ದೇವೆ. ಕೆಲಬಾರಿ ಸುದ್ದಿಯ ಒತ್ತಡದಿಂದ ವಿಳಂಬ ಆಗಬಹುದಾದರೂ ಆದರದಿಂದ ನಾವದನ್ನು ಗುರುತಿಸುತ್ತೇವೆ ಎಂದರು. 64 ವರ್ಷಗಳ ಅಪೂರ್ವ ಇತಿಹಾಸದಲ್ಲಿ ಇದೇ ಪ್ರಪ್ರಥಮವಾಗಿ ಶಿರಸಿ ರೋಟರಿಯ ಮಹಿಳಾ ಅಧ್ಯಕ್ಷ, ಕಾರ್ಯದರ್ಶಿಗಳಾದ ಡಾ. ಸುಮನ್ ಹೆಗಡೆ ಮತ್ತು ಸರಸ್ವತಿ ಎನ್. ರವಿ ತಮ್ಮ ತಂಡದೊಂದಿಗೆ ಎಲ್ಲ ಉತ್ತಮ ಕಾರ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ವರ್ಷದಲ್ಲಿ ವಿಶೇಷ ಪ್ರಶಸ್ತಿಗೆ ಭಾಜನರಾದ ಪತ್ರಕರ್ತರನ್ನು ಗೌರವಿಸಿ, ಅವರೊಡನೆ ತುಸು ಕಾಲ ಕಳೆಯಲು ಸಂಕಲ್ಪಿಸಿ ಈ ಕಾರ್ಯಕ್ರಮ ಸಂಘಟಿಸಿದ್ದರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಕರ್ನಾಟಕ ಸರಕಾರದ ಕರ್ನಾಟಕ ಗಡಿಪ್ರದೇಶದ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅಂತೆಯೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಜಂಟಿಯಾಗಿ ಪ್ರದಾನ ಮಾಡಿದ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ ಜಿ. ಸುಬ್ರಾಯ ಭಟ್ಟ ಬಕ್ಕಳ ಹಾಗೂ ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಈ ವರ್ಷದ ಮಾಧ್ಯಮಶ್ರೀ ಪ್ರಶಸ್ತಿಗೆ ಭಾಜನರಾದ ರಾಘವೇಂದ್ರ ಬೆಟ್ಟಕೊಪ್ಪ ಅವರುಗಳನ್ನು ರೋಟರಿ ಅಧ್ಯಕ್ಷ – ಕಾರ್ಯದರ್ಶಿಯವರು ರೋಟರಿಯ ಹಿರಿಯ ಸದಸ್ಯರುಗಳಾದ ಪತ್ರಕರ್ತ ರವಿ ಹೆಗಡೆ ಗಡಿಹಳ್ಳಿ, ಪ್ರೊll ಕೆ.ಎನ್. ಹೊಸ್ಮನಿ ಮತ್ತು ಡಾ. ಶಿವರಾಮರೊಡಗೂಡಿ ನೆರವೇರಿಸಿದರು.
ಸನ್ಮಾನಕ್ಕುತ್ತರಿಸಿದ ಶಿರಸಿ ಸಮಾಚಾರ ಮತ್ತು ಸುಮುಖ ಟಿ.ವಿ. ಸಂಪಾದಕ ಹಾಗೂ ಉ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸತತ 4ನೇ ಅವಧಿಗೆ ಅಧ್ಯಕ್ಷರಾಗಿರುವ ಸುಬ್ರಾಯ ಬಕ್ಕಳ ಮಾತನಾಡಿ ನಿರಂತರ ಸ್ವಂತಿಕೆಯಿಂದ ಮತ್ತು ಸ್ವತಂತ್ರವಾಗಿ ತಾವು ಸಾಗಿಬಂದ ಮಾರ್ಗವನ್ನು ವಿವರಿಸಿ, ಉಚಿತ ಕೊಡುಗೆ ಮತ್ತು ದರಸಮರದ ನಡುವೆಯೂ ತಾವು ಗಟ್ಟಿಯಾಗಿ ನೆಲೆಯೂರಿದ ಬಗ್ಗೆ ಸಂತಸ ವ್ಯಕ್ತಪಡಿಸಿ, ಸದಾ ಒಳಿತನ್ನು ಪೋಷಿಸಿಕೊಂಡು ಬಂದ ಶಿರಸಿ ರೋಟರಿಯಿಂದ ನಮ್ಮ ಸಂಘಕ್ಕೂ ಸಹಾಯ ಸಿಕ್ಕಲ್ಲಿ ಪ್ರಸಕ್ತ ಕೇವಲ 2 ದತ್ತಿನಿಧಿ ಹೊಂದಿರುವ ನಾವು ಹೆಚ್ಚೆಚ್ಚು ದತ್ತಿನಿಧಿ ಸ್ಥಾಪಿಸಲು ಸಾಧ್ಯ ಎಂದು ವಿನಂತಿಸಿದರು.
ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ಟ ವೇದಿಕೆಯಲ್ಲಿದ್ದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷೆ ಡಾ. ಸುಮನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಸರಸ್ವತಿ ನಿರ್ವಹಿಸಿ ವಂದಿಸಿದರು.