ದಾಂಡೇಲಿ : ವಿದ್ಯಾರ್ಥಿನಿಯರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಪಾಲಕರಿಂದ ದೂರುಗಳು ಬಂದಿದ್ದಲ್ಲಿ, ಕಾಲೇಜಿನ ಸುತ್ತಮುತ್ತ ಅಹಿತಕರ ಘಟನೆಗಳು ನಡೆಯುತ್ತಿದ್ದಲ್ಲಿ ಅಥವಾ ನಡೆಯುವ ಸಾಧ್ಯತೆಯಿದ್ದಲ್ಲಿ ಇದರ ಬಗ್ಗೆ ಮಾಹಿತಿಯನ್ನು ಪಡೆದು ಸೂಕ್ತ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಗರ ಠಾಣೆಯ ಪಿಎಸ್ಐ ಯಲ್ಲಪ್ಪ ಅವರ ನೇತೃತ್ವದಡಿ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಗರದ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ, ಕಾಲೇಜುಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು.
ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವ ಸಮಯದಲ್ಲಿ ಮತ್ತು ಕಾಲೇಜಿನಿಂದ ಹೋಗುವ ಸಮಯದಲ್ಲಿ ಏನಾದರೂ ಸಮಸ್ಯೆಗಳಾದ ಸಂದರ್ಭದಲ್ಲಿ ಅಥವಾ ಯಾರಿಂದಾದರೂ ಉಪಟಳಗಳು ನಡೆದಲ್ಲಿ ಅಥವಾ ನಡೆಯುವ ಸಾಧ್ಯತೆಯಿದ್ದಲ್ಲಿ ತಕ್ಷಣವೇ ಠಾಣೆಗೆ ತಿಳಿಸುವಂತೆ ಪೊಲೀಸ್ ಅಧಿಕಾರಿಗಳು ಆಯಾಯ ಕಾಲೇಜುಗಳ ಮುಖ್ಯಸ್ಥರುಗಳಿಗೆ ತಿಳಿಸಿದ್ದಾರೆ.
ನಗರದ ಬಂಗೂರನಗರ ಪದವಿ ಮಹಾ ವಿದ್ಯಾಲಯ, ಬಂಗೂರನಗರ ಜೂನಿಯರ್ ಕಾಲೇಜ್, ಜನತಾ ವಿದ್ಯಾಲಯ, ಕನ್ಯಾ ವಿದ್ಯಾಲಯ, ಹಳೆ ದಾಂಡೇಲಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಜೆಟಿಟಿಸಿ ಕಾಲೇಜು ಮತ್ತು ಸರಕಾರಿ ಹಾಗೂ ಖಾಸಗಿ ಐಟಿಐ ಕಾಲೇಜುಗಳಿಗೆ ಭೇಟಿ ನೀಡಿ ಕಾಲೇಜುಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿ, ಯಾವುದೇ ಸಂದರ್ಭದಲ್ಲಿಯೂ ಇಲಾಖೆಗೆ ಮಾಹಿತಿಯನ್ನು ನೀಡುವಂತೆ ಸೂಚಿಸಲಾಯಿತು.
ಪಿಎಸ್ಐ ಯಲ್ಲಪ್ಪ.ಎಸ್ ಅವರ ನೇತೃತ್ವದ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ತಂಡದ ಈ ಕಾರ್ಯಕ್ಕೆ ನಗರದಲ್ಲಿದೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.