ಸಿದ್ದಾಪುರ: ಇಲ್ಲಿಯ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ಅವರು ಪ್ರಧಾನಿಯವರ ಮನಕಿಬಾತ್ನಿಂದ ಪ್ರೇರಣೆ ಪಡೆದು ಸಿದ್ದಾಪುರದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮ ಕುರಿತ “ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು” ಕೃತಿಯನ್ನು ರಚಿಸಿ ಪ್ರಧಾನಿ ನರೇಂದ್ರಮೋದಿಯವರಿಗೆ ಸಮರ್ಪಿಸಿದ್ದರು. ಈ ಕೃತಿಯನ್ನು ಮೆಚ್ಚಿರುವ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಗರಾಜ ಭಟ್ಟರಿಗೆ ಈ ಕುರಿತು ಅಭಿನಂದನಾ ಪತ್ರವನ್ನು ಕಳಿಸಿದ್ದಾರೆ.
“ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಿದ್ದಾಪುರದ ಮಹತ್ವವನ್ನು ದಾಖಲಿಸುವ ಪುಸ್ತಕವನ್ನು ಬರೆದಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು. ಪುಸ್ತಕದ ಪ್ರತಿಯನ್ನು ನನಗೆ ಕಳಿಸಿದ್ದಕ್ಕಾಗಿ ಧನ್ಯವಾದಗಳು. ರಾಷ್ಟ್ರದ ಸ್ವಾತಂತ್ರ್ಯ ಚಳವಳಿಯಲ್ಲಿ ಸಿದ್ದಾಪುರದ ಸ್ವಾತಂತ್ರ್ಯ ಹೋರಾಟಗಾರರು ವಹಿಸಿರುವ ಪಾತ್ರವನ್ನು ದಾಖಲಿಸುವ ಈ ಉದಾತ್ತ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇದು ಯುವ ಪೀಳಿಗೆಗೆ ರಾಷ್ಟ್ರದ ಪ್ರಗತಿಗಾಗಿ ಕೆಲಸ ಮಾಡಲು ಪ್ರೇರಣೆಯಾಗುತ್ತದೆ. ಅಲ್ಲದೇ 2047 ರ ವೇಳೆಗೆ ವಿಕಸಿತ ಭಾರತವನ್ನು ಕಟ್ಟಲು ಸಹಕಾರಿಯಾಗುತ್ತದೆ, ತನ್ಮೂಲಕ ನಮ್ಮ ದೇಶದ ಸ್ವಾತಂತ್ರ್ಯ ಯೋಧರಿಗೆ ಸ್ಮರಣೆಯ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ. ಈ ಕೃತಿಯು ಹೆಚ್ಚಿನ ಜನರನ್ನು ತಲುಪಿ ಓದುವಂತಾಗಲಿ, ಅವರಿಂದ ಮೆಚ್ಚುಗೆಗೆ ಪಾತ್ರವಾಗಲಿ” ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪತ್ರದಲ್ಲಿ ಆಶಯವನ್ನು ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.