ಹೊನ್ನಾವರ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅನುಮೋದನೆಯ ಮೇರೆಗೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ್ ಗಾಂವಕರ್ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಪಕ್ಷದ ಹಿರಿಯ ಮುಖಂಡ ಹೊನ್ನಾವರದ ಜಗದೀಪ್ ಎನ್. ತೆಂಗೇರಿಯವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ತಮಗೆ ನೀಡಿರುವ ಜವಾಬ್ದಾರಿಯನ್ನು ತಕ್ಷಣ ವಹಿಸಿಕೊಂಡು ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಸಹಯೋಗದೊಂದಿಗೆ ಪಕ್ಷ ಸಂಘಟಿಸುವ ಮೂಲಕ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕೆಂದು ಆದೇಶ ಪತ್ರದಲ್ಲಿ ಸೂಚಿಸಲಾಗಿದೆ ಎಂದು ಜಗದೀಪ್ ಎನ್.ತೆಂಗೇರಿಯವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ನಾನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲೇ, ನನ್ನನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆದೇಶ ಹೊರಡಿಸಲಾಗಿತ್ತು. ಕಾಂಗ್ರೆಸ್ ಪಕ್ಷದ ನಿಯಮಾವಳಿಯ ಪ್ರಕಾರ ಪಕ್ಷದಲ್ಲಿ ಒಬ್ಬರಿಗೆ ಒಂದೇ ಸ್ಥಾನದ ಅನ್ವಯ ಮತ್ತು ನಾನು ಅಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಂತಹ ಗುರುತರ ಜವಾಬ್ದಾರಿಯಲ್ಲಿರುವಾಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆ ಸ್ವೀಕರಿಸಿರಲಿಲ್ಲ. ಕಳೆದ ಮೇ ತಿಂಗಳ ಅಂತ್ಯದಲ್ಲಿ ನಾನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ ನಂತರ, ಕಳೆದ ವಾರ ಶಿರಸಿಯ ಅಂಬೇಡ್ಕರ್ ಭವನದಲ್ಲಿ ಕೆನರಾ ಲೋಕಸಭಾ ಚುನಾವಣೆಯಲ್ಲಾದ ಸೋಲಿನ ಪರಾಮರ್ಶೆ ಕುರಿತಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ನೇತ್ರತ್ವದ ಸತ್ಯಶೋಧನಾ ಸಮಿತಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪಾಲ್ಗೊಳ್ಳುವ ಮೂಲಕ ಪಕ್ಷದ ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ ಎಂದು ಜಗದೀಪ್ ಎನ್.ತೆಂಗೇರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
1983ರಲ್ಲಿ ಹೊನ್ನಾವರ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರಾಗಿ, 1991ರಿಂದ 1999 ರವರೆಗೆ ಹೊನ್ನಾವರ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ, 2000 ರಿಂದ 2010 ರವರೆಗೆ ಹೊನ್ನಾವರ ತಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿ, 2010 ರಿಂದ 2017ರವರೆಗೆ ಭೀಮಣ್ಣಾ ನಾಯ್ಕ ಅಧ್ಯಕ್ಷತೆಯ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, 2017ರಿಂದ 2024ರವರೆಗೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದಲ್ಲಿ 40 ವರ್ಷಕ್ಕೂ ದೀರ್ಘ ಸಮಯ ಸೇವೆಸಲ್ಲಿಸಿದ ಜಗದೀಪ್ ಎನ್.ತೆಂಗೇರಿಯವರಿಗೆ ಈಗ ಪುನಃ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ್ ಗಾಂವಕರ ಅವರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಂತಹ ಜವಾಬ್ದಾರಿ ಸ್ಥಾನ ನೀಡಿರುವುದು ನಮ್ಮೆಲ್ಲರಿಗೂ ಹರ್ಷ ತಂದಿದೆ ಎಂದು ಹೊನ್ನಾವರ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ ಸಂತಸ ವ್ಯಕ್ತಪಡಿಸಿದ್ದಾರೆ.