ಬನವಾಸಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿರುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಇದರ ಯಶಸ್ವಿ ಅನುಷ್ಠಾನಕ್ಕೆ ವ್ಯಾಪಕ ಪ್ರಚಾರ ಮತ್ತು ಅನುಸರಣಾ ಕಾರ್ಯ ರೂಢಿಸಲಾಗುತ್ತಿದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಘವೇಂದ್ರ ನಾಯ್ಕ್ ತಿಳಿಸಿದರು.
ಇಲ್ಲಿಯ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬನವಾಸಿ ವಲಯದಿಂದ ಭಾನುವಾರ ಹಮ್ಮಿಕೊಳ್ಳಲಾದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಅವರು, ಮದ್ಯವ್ಯಸನ, ಗುಟ್ಕಾ, ಧೂಮಪಾನಗಳಿಂದ ಯುವ ಜನತೆಯ ಜೀವನ ಹಾಳಾಗುತ್ತಿದೆ. ಸಹವಾಸ ದೋಷ, ಆಕಸ್ಮಿಕ ಆಕರ್ಷಣೆಗಳ ಕಾರಣ ದುಶ್ಚಟ ಒಮ್ಮೆ ಆರಂಭವಾದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ. ಇದರಿಂದ ವೈಯಕ್ತಿಕ ಜೀವನದ ಜೊತೆ ಜೊತೆಗೆ ಸಮಾಜದ ಸ್ವಾಸ್ಥ್ಯ ಸಹ ಹಾಳಾಗುತ್ತದೆ. ವಿದ್ಯಾರ್ಥಿ ಜೀವನದ ದೆಸೆಯಿಂದಲೇ ಯುವ ಜನತೆಯು ಉತ್ತಮ ಕ್ರಿಯಾಶೀಲ ಹವ್ಯಾಸಗಳನ್ನು ರೂಢಿಸಿಕೊಂಡು ಉತ್ತಮ ಸಮಾಜ ಕಟ್ಟುವ ಕಾರ್ಯಕ್ರಮಕ್ಕೆ ದೃಢ ಸಂಕಲ್ಪ ಕೈಗೊಳ್ಳಬೇಕು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಮದ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಕಾರ್ಯವನ್ನು ಮಾಡುತ್ತಿದೆ ಎಂದರು.
ಬನವಾಸಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಬೀಬಿ ಆಯಿಷಾ ಖಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಲಯ ಮೇಲ್ವಿಚಾರಕ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕ್ಕೂಟದ ಅಧ್ಯಕ್ಷೆ ಗಂಗಾ ಸಹವಾಸಿ ಅಧ್ಯಕ್ಷತೆವಹಿಸಿದ್ದರು. ವಿಎಲ್ಇ ವಸುಮತಿ, ಪತ್ರಕರ್ತ ಸುಧೀರ ನಾಯರ್, ಗ್ರಾಪಂ ಸದಸ್ಯರಾದ ಜ್ಯೋತಿ ಚನ್ನಯ್ಯ, ಜಮೀಲಾಬಿ ಮುನಿರ್ ಖಾನ್, ಒಕ್ಕೂಟದ ಪದಾಧಿಕಾರಿಗಳಾದ ವೀಣಾ ಸಾಲಿ, ಸರೋಜ ಮೋರೆ, ರೇವತಿ ಲಠೋರಿ ಮತ್ತಿತರರು ಇದ್ದರು.
ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನೀಡುವ ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರಾತಿ ಪತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮವನ್ನು ಸೇವಾ ಪ್ರತಿನಿಧಿ ಸವಿತಾ ಆಚಾರಿ ನಿರೂಪಿಸಿದರು. ಚೇತನಾ, ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಸೇವಾ ಪ್ರತಿನಿಧಿ ಅನಿತಾ.ಕೆ ಸ್ವಾಗತಿಸಿದರು. ವೀಣಾ ಎಸ್.ಶೇಟ್ ವಂದಿಸಿದರು.