ಯಲ್ಲಾಪುರ: ಅತಿಯಾದ ಮಳೆ, ಭೂ ಕಂಪನದ ಕಾರಣ ಶಿರಸಿ ಯಲ್ಲಾಪುರ ಹಾಗೂ ಅಂಕೋಲಾ ಸಂಪರ್ಕಕ್ಕೆ ಅನುಕೂಲವಾಗಿದ್ದ ಕನಕನಳ್ಳಿಯ ಬಳಜಗ್ಗೆ ಮೇಲ್ಬಾಗದ ಬಳಿ ಶನಿವಾರ ಸಂಜೆ ರಸ್ತೆ ಇಬ್ಭಾಗವಾಗಿದೆ.
ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪ್ರದೇಶದ ರಸ್ತೆ ಇದಾಗಿದ್ದು, ಮಳೆ ಮುಂದುವರೆದರೆ ಮತ್ತೆ 2 ಎಕರೆ ಕ್ಷೇತ್ರ ಕುಸಿಯುವ ಸಾಧ್ಯತೆಗಳಿದೆ. ಕನಕನಹಳ್ಳಿಯಿಂದ ಮುಸ್ಕಿ – ಕಕ್ಕಳ್ಳಿ – ಶಿರಸಿಗೆ ತೆರಳುವ ರಸ್ತೆ ನಡುವೆ ಕಂದಕ ನಿರ್ಮಾಣವಾಗಿದೆ. ಕನಕನಳ್ಳಿ ಹಾಗೂ ಸುತ್ತಮುತ್ತಲಿನ ಜನ ಶಿರಸಿಗೆ ತೆರಳಲು ಈ ರಸ್ತೆಯನ್ನು ಉಪಯೋಗಿಸುತ್ತಿದ್ದರು. ನೆರೆ ಪ್ರವಾಹದ ಅವಧಿಯಲ್ಲಿ ಮತ್ತಿಘಟ್ಟ-ಹಳವಳ್ಳಿ ಭಾಗದವರ ಸಂಚಾರಕ್ಕೆ ಈ ರಸ್ತೆ ಸಾಕಷ್ಟು ಸಹಕಾರಿಯಾಗಿತ್ತು.
ಈ ಮಾರ್ಗದಲ್ಲಿ ಬೇಸಿಗೆ ಅವಧಿಯಲ್ಲಿ ಅತ್ಯಧಿಕ ಜನ ಸಂಚರಿಸುತ್ತಿದ್ದು, ಮಳೆಗಾಲದ ಅವಧಿಯಲ್ಲಿ ಜನ ಬೈಕ್ ಹಾಗೂ ಜೀಪ್’ಗಳನ್ನು ಮಾತ್ರ ಈ ರಸ್ತೆಯಲ್ಲಿ ಓಡಿಸುತ್ತಿದ್ದರು. ಕಳೆದ ಒಂದು ವಾರದ ಹಿಂದೆ ಮತ್ತಿಘಟ್ಟ ರಸ್ತೆಯ ಮೋರಿ ಕುಸಿತವಾದ ಕಾರಣ ಸಂಚಾರ ಅಸ್ತವ್ಯಸ್ಥವಾಗಿತ್ತು. ಇದೀಗ ಮುಶ್ಕಿ ಘಟ್ಟ ಪ್ರದೇಶದಲ್ಲಿ ಸಹ ರಸ್ತೆ ಇಬ್ಭಾಗವಾಗಿದ್ದರಿಂದ ಸಂಚಾರ ಪೂರ್ತಿಯಾಗಿ ಸ್ಥಗಿತಗೊಂಡಿದೆ.