ದಾಂಡೇಲಿ : ಕಳೆದ 20 ತಿಂಗಳಿನಿಂದ ವೇತನ ಪರಿಷ್ಕರಣೆಗಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಮಿಕರ ವೇತನ ಪರಿಷ್ಕರಣೆಯ ಕುರಿತಂತೆ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಶನಿವಾರ ಸಂಜೆ ಕಾಗದ ಕಾರ್ಖಾನೆಯ ಆವರಣದಲ್ಲಿರುವ ರಂಗನಾಥ ಸಭಾಭವನದ ಹತ್ತಿರ ಗೇಟ್ ಮೀಟಿಂಗ್ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಂಟಿ ಸಂದಾನ ಸಮಿತಿಯ ಅಧ್ಯಕ್ಷರಾದ ಎಸ್.ವಿ.ಸಾವಂತ್, ಪ್ರಧಾನ ಕಾರ್ಯದರ್ಶಿ ವಿಷ್ಣು ವಾಜ್ವೆ ಮತ್ತು ಸದಸ್ಯರಾದ ಬಿ.ಡಿ.ಹಿರೇಮಠ್ ನಾವು ಕಾರ್ಮಿಕರಿಗೆ ನ್ಯಾಯವಾಗಿ ಸಿಗಬೇಕಾದ ವೇತನ ಸಹಿತ ಸೌಲಭ್ಯವನ್ನು ಕೊಡಿಸುವ ನಿಟ್ಟಿನಲ್ಲಿ ಕಾಗದ ಕಾರ್ಖಾನೆಯ ಆಡಳಿತ ಮಂಡಳಿಗೆ ನಿರಂತರವಾಗಿ ಆಗ್ರಹಿಸುತ್ತಲೇ ಬಂದಿದ್ದೇವೆ. ನಾವು ಈ ಬಾರಿ 87,000/- ರೂ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಬೇಡಿಕೆ ಪತ್ರವನ್ನು ಸಲ್ಲಿಸಿದ್ದೇವೆ. ಈ ಬಗ್ಗೆ ಕಾಗದ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಜಂಟಿ ಸಂವಿಧಾನ ಸಮಿತಿಯ ಮಧ್ಯೆ ಸಾಕಷ್ಟು ಬಾರಿ ಸಭೆ ನಡೆದಿರುತ್ತದೆ. ಕಾರ್ಮಿಕರ ವೇತನ ಪರಿಷ್ಕರಣೆಗೆ ಸಂಬಂಧಪಟ್ಟಂತೆ ನಾವು ರೂ.9800/- ವೇತನ ಪರಿಷ್ಕರಣೆಯವರೆಗೆ ಬಂದಿದ್ದೇವೆ. ಆದರೆ ಕಾಗದ ಕಾರ್ಖಾನೆಯ ಆಡಳಿತ ಮಂಡಳಿ ರೂ: 3001/- ವೇತನ ಪರಿಷ್ಕರಣೆ ಮಾಡುವುದಾಗಿ ಪಟ್ಟು ಹಿಡಿದಿದೆ. ಇದಕ್ಕೆ ನಾವು ಒಪ್ಪಿಗೆಯನ್ನು ನೀಡಿಲ್ಲ. ಹಾಗಾಗಿ ನಾವು 9,800/- ರೂ ವೇತನ ಪರಿಷ್ಕರಣೆಯನ್ನು ಮಾಡಬೇಕೆಂದು ಆಗ್ರಹಿಸಿದ್ದೇವೆ ಎಂದರು. ಆದರೆ ಕಾಗದ ಕಾರ್ಖಾನೆಯ ಆಡಳಿತ ಮಂಡಳಿ ನಮ್ಮ ಬೇಡಿಕೆಗೆ ಒಪ್ಪದೇ ಇರುವುದರಿಂದ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ಸಭೆಯನ್ನು ಆಯೋಜಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕರು ಆಕ್ರೋಶವನ್ನು ವ್ಯಕ್ತಪಡಿಸಿದರು. ಇವತ್ತು ನಿರ್ಣಯ ತೆಗೆದುಕೊಳ್ಳುವವರಿಗೆ ಇಲ್ಲಿಂದ ಹೋಗದಂತೆ ಜಂಟಿ ಸಂಧಾನ ಸಮಿತಿಯವರನ್ನು ಒತ್ತಾಯಿಸಿದರು. ಆನಂತರ ಜಂಟಿ ಸಂಧಾನ ಸಮಿತಿಯವರು ಕಾಗದ ಕಾರ್ಖಾನೆಯ ಆಡಳಿತ ಮಂಡಳಿಯವರ ಜೊತೆ ಮಾತುಕತೆ ನಡೆಸಿ ಈ ಬಗ್ಗೆ ಸೋಮವಾರ ನಿರ್ಣಯ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಉಪಸ್ಥಿತರಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಏರ್ಪಡಿಸಲಾಗಿತ್ತು.