ಹೊನ್ನಾವರ : ತಾಲೂಕಿನಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಎಡೆಬಿಡದೆ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಬೇಸರ ಮೂಡಿಸುವಷ್ಟು ಮಳೆ ಆಗುತ್ತಿದೆ. ಅಲ್ಲಲ್ಲಿ ಹಾನಿ, ಅವಘಡ ಸಂಭವಿಸಿದ್ದು, ಪ್ರವಾಹ ಮುಂದುವರಿದಿದೆ. ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.
ಗುಂಡಬಾಳ, ಬಾಸ್ಕೇರಿ, ಬಡಗಣಿ ಹೊಳೆ ಭರ್ತಿಯಾಗಿ ಮೈದುಂಬಿ ಹರಿದಿದೆ. ನೀರು ತುಂಬಿದ ನದಿ ತಟದ ಮನೆಯ ಒಳಗಡೆ ಪ್ರವೇಶ ಮಾಡಿದೆ. ಸುತ್ತಮುತ್ತಲಿನ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ. ಹೊಸಾಕುಳಿಯಲ್ಲಿ ಗುಡ್ಡ ಕುಸಿತವಾಗಿ ಬಂಡೆ ಉರುಳಿ ಬಿದ್ದು ಮನೆಗೆ ಹಾನಿ ಆಗಿದೆ. ಮನೆಯಲ್ಲಿದ್ದ ಪ್ರಿಡ್ಜ್ ಇನ್ನಿತರ ಸಾಮಗ್ರಿಗೆ ಹಾನಿ ಉಂಟಾಗಿದೆ. ಸರಿಸುಮಾರು 15-20 ದಿನದಿಂದ ಇದೇ ಪರಿಸ್ಥಿತಿ ಉಂಟಾಗಿದ್ದು, ನದಿ ಅಂಚಿನ ಜನರಿಗೆ ಕಾಳಜಿ ಕೇಂದ್ರ, ಮನೆ ಓಡಾಟವೇ ಆಗಿ ಬಿಟ್ಟಿದೆ. ನೆರೆ ಇಳಿದು ಮನೆ ಸ್ವಚ್ಛಗೊಳಿಸುವಷ್ಟರಲ್ಲಿ ಮತ್ತೆ ನೀರು ಬಂದು ಅವಾಂತರ ಉಂಟುಮಾಡುತ್ತಿದೆ.
ಭಾಸ್ಕೇರಿ ನದಿಗೆ ಹೊಂದಿಕೊಂಡಿರುವ ದೊಡ್ಡಹಿತ್ಲು, ಬಾಸ್ಕೇರಿ, ಬಾಳೆಗದ್ದೆ, ಹೊಸಾಕುಳಿ, ಬಂಕನಹಿತ್ಲು, ಗುಂಡಬಾಳ ನದಿಗೆ ಹೊಂದಿಕೊಂಡಿರುವ ಗುಂಡಬಾಳ, ಮುಟ್ಟಾ, ಚಿಕ್ಕನಕೊಡ, ಗುಂಡಿಬೈಲ್, ಹಾಡಗೇರಿ, ಹುಡಗೋಡ, ಕಡಗೇರಿ, ಹಡಿನಬಾಳ, ಖರ್ವಾ, ನಾಥಗೇರಿ, ಕಾವೂರು, ಕೂಡ್ಲ ಹೀಗೆ ಇನ್ನೂ ಅನೇಕ ಗ್ರಾಮದ ಜನರು ಪ್ರವಾಹಕ್ಕೆ ಸಿಲುಕಿ ಕಾಳಜಿ ಕೇಂದ್ರ ಆಶ್ರಯ ಪಡೆಯುವುದು ಪ್ರತಿ ವರ್ಷದ ದಿನಚರಿ ಆದಂತೆ ಆಗಿದೆ.
ಕಾಳಜಿ ಕೇಂದ್ರದ ಮಾಹಿತಿ :
ಸ.ಹಿ.ಪ್ರಾ. ಶಾಲೆ ನಾಥಗೇರಿಯಲ್ಲಿ 15, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಗೇರಿ 14, ಸ.ಹಿ.ಪ್ರಾ ಶಾಲೆ ಗುಂಡಬಾಳ ನಂ. 2 ರಲ್ಲಿ 13, ಹೆಬೈಲ್ ಅಂಗನವಾಡಿ ಕೇಂದ್ರದಲ್ಲಿ 7, ಸ. ಹಿ. ಪ್ರಾ ಶಾಲೆ ಗುಂಡಿಬೈಲ್ ನಂ. 2 ನಲ್ಲಿ 49, ಸ. ಹಿ. ಪ್ರಾ ಶಾಲೆ ಹಡಿನಬಾಳ 113, ಸ. ಹಿ. ಪ್ರಾ ಶಾಲೆ ಸರಳಗಿ(ಕನ್ನಡ )68, ಸ. ಹಿ. ಪ್ರಾ ಶಾಲೆ ಅಳ್ಳಂಕಿ 25, ಸ. ಹಿ. ಪ್ರಾ ಶಾಲೆ ಗುಂಡಿಬೈಲ್ ನಂ. 1 ರಲ್ಲಿ 37 ಒಟ್ಟು 341 ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.