ಕಾರವಾರ: ಜೋಳಿಗೆ ಸ್ವಾಮೀಜಿಗಳೆಂದು ಖ್ಯಾತರಾಗಿದ್ದ ಡಾ.ಮಹಾಂತ ಸ್ವಾಮೀಜಿಗಳು ಕನ್ನಡ ನಾಡಿನಲ್ಲಿ ವ್ಯಸನಗಳ ವಿರುದ್ಧ ಕ್ರಾಂತಿಯನ್ನು ಉಂಟುಮಾಡಿದ್ದರು.ಜೋಳಿಗೆ ಹಿಡಿದು ದುಶ್ಚಟಗಳ ವಸ್ತುಗಳನ್ನು ಮಹಾಂತ ಜೋಳಿಗೆಯಲ್ಲಿ ಹಾರಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಅವಿರತವಾಗಿ ಹೋರಾಡಿದರೆಂದು ಕಾರವಾರ ತಾಲೂಕಾ ದಂಡಾಧಿಕಾರಿಗಳಾದ ಎನ್. ಎಫ್. ನರೋನ್ಹಾ ಹೇಳಿದರು. ಅವರು ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಆಯೋಜಿಸಿದ ವ್ಯಸನಮುಕ್ತ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಾ ಶ್ರೀ ಸ್ವಾಮೀಜಿಗಳ ಜನ್ಮದಿನಾಚರಣೆಯನ್ನು ವ್ಯಸನಮುಕ್ತ ದಿನಾಚರಣೆಯಾಗಿ ಸರ್ಕಾರ ಆಚರಿಸುತ್ತಿರುವದು ಅರ್ಥಪೂರ್ಣವಾಗಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಕ.ಸಾ.ಪ.ಕಾರವಾರದ ಗೌರವ ಕಾರ್ಯದರ್ಶಿ ಡಾ.ಗಣೇಶ ಬಿಷ್ಟಣ್ಣನವರ ಮಾತನಾಡಿ ಬಸವ ತತ್ವದ ಮೂಲಕ ಸಮುದಾಯದ ಆಳ, ಅರಿವು ಅರಿತ ಅಪ್ಪನವರು ಮೌಢ್ಯದ ವಿರುದ್ಧ ಚಳವಳಿಯನ್ನು ಮಾಡಿದರು. ಲಿಂಗಸಮಾನತೆ, ಮೂಢನಂಬಿಕೆಗಳ ಕುರಿತು ಜಾಗೃತಿ ಮೂಡಿಸಿದರು. ಇಳಕಲ್ ಚಿತ್ರಗಿ ಮಠದ ಪೀಠಾಧಿಪತಿಗಳಾಗಿ ನಿರಂತರ ದಾಸೋಹ, ರೈತರಿಗೆ ಅನುಕೂಲತೆ ಮಾಡಿ ಸುಂದರ ನಾಡು ಕಟ್ಟಲು ಕಾರಣಿಭೂತರಾದರೆಂದರು.ಮುಖ್ಯ ಅತಿಥಿಯಾಗಿ ತಾಲೂಕು ಪಂಚಾಯತ ಕಾರ್ಯ ನಿರ್ವಹಣಾಧಿಕಾರಿಗಳಾದ ಡಾ.ಆನಂದಕುಮಾರ ಬಾಲಪ್ಪನವರ ಆಗಮಿಸಿದ್ದರು. ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಿಕ್ಷಕ ಮಹದೇವ ರಾಣೆ ಸ್ವಾಗತಿಸಿ ನಿರೂಪಿಸಿದರು. ತಹಶೀಲ್ದಾರ ಕಚೇರಿಯ ಶ್ರೀಮತಿ ರೂಪಾ ಬಾಡಕರ, ಗ್ರೇಡ 2 ತಹಶೀಲ್ದಾರ್ ಪ್ರಭಾರ, ಪ್ರತಾಪ ರಾಣಿ, ದಾಮೋದರ ಹುಲ್ಸವಾರ, ಸುಭಾಷ ಅಂಬಿಗ ಶೀರಸ್ತೆದಾರರು ಮತ್ತು ತಹಶೀಲ್ದಾರ ಕಚೇರಿಯ ಮತ್ತು ನಗರ ಸಭೆ ಹಾಗೂ ತಾಲ್ಲೂಕ ಪಂಚಾಯತ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.