ಶಿರಸಿ: ಸಹಕಾರ ಸಂಘಗಳ ಕಾಯಿದೆ 1959ಕ್ಕೆ ತಿದ್ದುಪಡಿಯನ್ನು ತರಲು ರಾಜ್ಯ ಸರ್ಕಾರವು ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತೆಗೆದುಕೊಳ್ಳಬಹುದಾದ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಉತ್ತರಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಾಹಕರ ತುರ್ತು ಸಭೆಯನ್ನು ಆ.3ರಂದು ಬೆಳಿಗ್ಗೆ ಶಿರಸಿಯ ಟಿಆರ್‌ಸಿ ಸಭಾಭವನದಲ್ಲಿ ಕರೆಯಲಾಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟವು ಸಹಕಾರ ಸಂಘಗಳ ಸ್ವಾಯತ್ತತೆಗೆ ಮಾರಕವಾಗಬಹುದಾದ ಈ ವಿಧೇಯಕದ ಅಂಶಗಳ ಬಗ್ಗೆ ಚರ್ಚಿಸಿ ಅಂತಹ ಅಂಶಗಳನ್ನು ಕೈಬಿಡುವಂತೆ ಈ ಹಿಂದೆ ಸಭೆ ನಡೆಸಿ ರಾಜ್ಯ ಸರಕಾರದ ಸಚಿವರು ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಪ್ರಸ್ತಾವನೆ ಕಳುಹಿಸಿತ್ತು. ಇದೀಗ ಸರ್ಕಾರವು ಈ ವಿಧೇಯಕಗಳನ್ನು ಮತ್ತೆ ಯಥಾವತ್ತಾಗಿ ಜಾರಿ ಮಾಡಲು ಮುಂದಾಗಿದ್ದು, ವಿಧೇಯಕವು ಅಂಗೀಕಾರದ ಅಂತಿಮ ಹಂತದಲ್ಲಿದೆ.
ಈ ತಿದ್ದುಪಡಿ ವಿಧೇಯಕಗಳು ನೇರವಾಗಿ ಸಹಕಾರ ಸಂಘಗಳ ಸ್ವಾಯತ್ತತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿರುವುದರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತು ಸಂಘಗಳ ಒಕ್ಕೂಟದ ಪ್ರಕಟಣೆ ತಿಳಿಸಿದೆ.