ಸಿದ್ದಾಪುರ: ತಾಲೂಕಿನ ವಾಜಗೋಡ ಗ್ರಾಪಂ ವ್ಯಾಪ್ತಿಯ ವಂದಾನೆ ಮುಖ್ಯರಸ್ತೆಯಿಂದ ಗೊದ್ಲಮನೆ ಊರಿಗೆ ತೆರಳುವ ಗ್ರಾಮೀಣ ಮುಖ್ಯ ರಸ್ತೆ ತಾರಿಮನೆ ಹತ್ತಿರ ಭಾರೀ ಮಳೆಯಿಂದಾಗಿ ಎರಡು ಕಡೆ ಧರೆ ಕುಸಿದು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ.
ಸುಮಾರು ನೂರು ಮೀಟರ್‌ನಷ್ಟು ಧರೆ ಕುಸಿದಿದ್ದು ರಸ್ತೆಗೆ ತಾಗಲು ಇನ್ನು ಒಂದೆರಡು ಅಡಿ ಮಾತ್ರ ಇದೆ. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಅಡಿ ಆಳ ಇದೆ ಹಂಗಾರಕೈ, ಕಲಕೈ, ಮಠದರಮನೆ, ಗೊದ್ಲಮನೆ, ಕಳ್ಳೆಗದ್ದೆ, ವಾಟೇಹಳ್ಳದ ಮೂಲಕ ಹೊನ್ನಾವರ ತಾಲೂಕಿಗೆ ಸಂಪರ್ಕ ನೀಡುವ ರಸ್ತೆ ಇದಾಗಿದೆ. ಮುಖ್ಯವಾಗಿ ಕಳ್ಳೆಗದ್ದೆಯ ಪರಿಶಿಷ್ಟ ಜಾತಿ ಕಾಲೋನಿಗೆ ತೆರಳುವ ರಸ್ತೆ.ಈ ರಸ್ತೆಯನ್ನು ಜಿಪಂ ಇಲಾಖೆ ನಿರ್ವಹಣೆ ಮಾಡುತ್ತಿದ್ದು ಸಂಬಂಧಪಟ್ಟ ಇಲಾಖೆ ಕೂಡಲೇ ಸ್ಥಳ ಪರಿಶೀಲಿಸಿ ದರೆಕುಸಿತ ತಡೆಯುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಿತ್ಯ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿಕಾರರು ಸೇರಿದಂತೆ ಎರಡು ನೂರಕ್ಕೂ ಹೆಚ್ಚು ಜನತೆ ಇಲ್ಲಿ ಸಂಚಾರ ಮಾಡುತ್ತಾರೆ. ಒಮ್ಮೆ ರಸ್ತೆ ಸಂಪರ್ಕ ಕಡಿತಗೊಂಡರೆ ಹತ್ತಾರು ಹಳ್ಳಿಗಳ ಜನತೆ ದಿನಸಿ ಅಂಗಡಿಗಳಿಗೆ, ಗ್ರಾಪಂಗೆ, ಹಾಲು ಸಂಘಕ್ಕೆ, ಸೇವಾ ಸಹಕಾರಿ ಸಂಘಕ್ಕೆ, ತಾಲೂಕು ಕೇಂದ್ರಕ್ಕೆ,ಅಂಚೆ ಕಚೇರಿಗೆ, ಪಡಿತರ ಪಡೆಯುವುದಕ್ಕೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯ ಪಡೆಯುವುದು ದುಸ್ತರವಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿದೆ.