“ಉದೀರ್ಣಃ ಸರ್ವತಶ್ಚಕ್ಷು ರನೀಶಃ ಶಾಶ್ವತಃ ಸ್ಥಿರಃ | ಭೂಶಯೋ ಭೂಷಣೋ ಭೂತಿರ್ ವಿಶೋಕಃ ಶೋಕ ನಾಶನಃ” ||
ಭಾವಾರ್ಥ:
‘ಉದೀರ್ಣನು’ ಎಂದರೆ ಎಲ್ಲರಿಗಿಂತಲೂ ಉತ್ಕೃಷ್ಟನಾದವನು. ಅವನು ಎಲ್ಲ ನಶ್ವರ ವಸ್ತುಗಳನ್ನೂ ಎಲ್ಲ ಮಿತಿಗಳನ್ನೂ,ವಿಕಾರಗಳನ್ನೂ ದಾಟಿದ್ದಾನೆ. ‘ಸರ್ವತಃ ಚಕ್ಷುಃ’ ಎಂದರೆ ಎಲ್ಲೆಲ್ಲಿಯೂ ಕಣ್ಣುಗಳಿರುವನು.ಎಲ್ಲಾ ಪ್ರಾಣಿ,ಪಶು,ಪಕ್ಷಿಗಳ ಕಣ್ಣುಗಳ ಹೊಂದಿರುವವನು ಅವನೇ. ಹಾಗಾಗಿ ಎಲ್ಲ ಕಣ್ಣುಗಳೂ ಅವನೇ.ಅವುಗಳ ಮೂಲಕ ನೋಡುವವನೂ ಅವನೇ. ಅವನಿಲ್ಲದಿದ್ದರೆ ಕಣ್ಣುಗಳಿದ್ದರೂ ಕುರುಡು. ಈತನಿಗೆ ಈಶ (ಒಡೆಯ) ಇಲ್ಲ. ಆದ್ದರಿಂದ ‘ಅನೀಶನು’.ಆತನನ್ನು ಆಳುವವನು ಯಾವನೊಬ್ಬನೂ ಇಲ್ಲ. ಎಂಬ ‘ಶ್ರುತಿ’ (ಮ.ನಾ.೨)ಯಿಂದ ಇದು ಸಿದ್ಧವಾಗುತ್ತದೆ. ಯಾವಾಗಲೂ ಇರುವಾತನಾದರೂ ಎಂದಿಗೂ ಮಾರ್ಪಾಡನ್ನು ಹೊಂದುವದಿಲ್ಲವಾಗಿದ್ದರಿಂದ ‘ಶಾಶ್ವತಸ್ಥಿರನು’.ಭೂ ಶಯ ಎಂದರೆ ಭೂಮಿಯ ಮೇಲೆ ಮಲಗಿದಾತನು.(ತ್ರೇತಾ ಯುಗದಲ್ಲಿ ಲಂಕೆಯ ಮಾರ್ಗ ಹುಡುಕುತ್ತಾ ಸಾಗರದ ದಡದ ಮೇಲೆ ಮಲಗಿದ್ದನು.)ತನ್ನ ಅವತಾರಗಳಿಂದ ಭೂಮಿಯನ್ನು ಅಲಂಕರಿಸಿದವನು.ಆದ್ದರಿಂದ ಭೂಷಣನು.’ಭೂತಿ’ಎಂದರೆ ಇರುವುದು.ಶುದ್ಧ ಇರುವಿಕೆ(ಸತ್) ಅಥವಾ ವಿಭೂತಿಯು.ಅಥವಾ ಎಲ್ಲಾ ವಿಭೂತಿಗಳಿಗೂ ಕಾರಣನಾಗಿರುವದರಿಂದ ‘ಭೂತಿ’ ಎಂದು ಅರ್ಥೈಸಬಹುದು. ಪರಮಾನಂದ ರೂಪನಾಗಿರುವದರಿಂದ ಇವನಿಗೆ ಶೋಕವಿಲ್ಲದಾಗಿದೆ. ಆದ್ದರಿಂದ ‘ವಿಶೋಕನು’.ಸ್ಮರಿಸಿದ ಮಾತ್ರದಿಂದ ಭಕ್ತರ ಶೋಕವನ್ನು ನಾಶಗೊಳಿಸುತ್ತಾನೆ.ಆದ್ದರಿಂದ ಶೋಕ ನಾಶನು.
ಶ್ಲೋಕದ ವೈಶಿಷ್ಟ್ಯ:-
ಸಮೀಪ ದೃಷ್ಠಿ,ದೂರ ದೃಷ್ಟಿಗಳ ಸಮಸ್ಯೆ ಇದ್ದವರು ನೇತೃಶಕ್ತಿಯ, ದೃಷ್ಟಿಪಾಟವದ ತೊಂದರೆ ಅಥವಾ ಯಾವುದೇ ಕಣ್ಣಿನ ದೋಷವಿದ್ದಲ್ಲಿ, ದೃಷ್ಟಿದೋಷ ಪರಿಹಾರಕ್ಕಾಗಿ ಈ ಮೇಲಿನ ಸ್ತೋತ್ರ ಹೇಳಿಕೊಳ್ಳಬಹುದು. ಅನುರಾಧ ಮೂರನೇ ಪಾದದಲ್ಲಿ ಜನಿಸುವವರು ಪ್ರತಿನಿತ್ಯ ೧೧ ಬಾರಿ ಹೇಳಿಕೊಳ್ಳುವ ಶ್ಲೋಕವೂ ಇದಾಗಿದೆ.
(ಸಂ:-ಡಾ. ಚಂದ್ರಶೇಖರ.ಎಲ್.ಭಟ್. ಬಳ್ಳಾರಿ)