ಜೋಯಿಡಾ : ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೈಂದೂರು ತಾ.ಪಂ. ನಿಂದ ವರ್ಗಾವಣೆಯಾಗಿ ಬಂದು ಮೂರು ತಿಂಗಳು ಜೋಯಿಡಾ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಯಾಗಿ ಎನ್. ಭಾರತಿಯವರು ಸೇವೆಯನ್ನು ಸಲ್ಲಿಸಿದ್ದರು.
ಕೇವಲ ಮೂರೇ ತಿಂಗಳಲ್ಲಿ ಪ್ರಾಮಾಣಿಕ ಅಧಿಕಾರಿಯಾಗಿ ಜನ ಮೆಚ್ಚುಗೆಯನ್ನು ಎನ್.ಭಾರತಿಯವರು ಪಡೆದುಕೊಂಡಿದ್ದರು. ಜೋಯಿಡಾ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಓಗಳನ್ನು ಕಾರ್ಯದರ್ಶಿಗಳನ್ನು ಹಾಗೂ ತಾಲೂಕು ಪಂಚಾಯಿತಿಯ ಸಿಬ್ಬಂದಿಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು ಅವರಿಂದ ಸಮರ್ಥವಾಗಿ ಕೆಲಸವನ್ನು ತೆಗೆದುಕೊಳ್ಳುತ್ತಿದ್ದ ಎನ್.ಭಾರತಿಯವರ ಕಾರ್ಯವೈಖರಿ ಮೆಚ್ಚುವಂತಹದ್ದಾಗಿತ್ತು.
ಜೋಯಿಡಾ ತಾಲೂಕಿನ ಪ್ರಗತಿಗೆ ಹಾಗೂ ಅಭಿವೃದ್ಧಿ ಕಾರ್ಯಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಎನ್.ಭಾರತಿಯವರು ಸಮರ್ಥ ಅಧಿಕಾರಿಯಾಗಿದ್ದು, ಅವರೇ ಜೋಯಿಡಾ ಬರುವಂತಾಗಲಿ ಎನ್ನುವುದು ತಾಲೂಕಿನ ಜನತೆಯ ಆಶಯವಾಗಿದೆ. ಹಾಲಿ ಬೈಂದೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಎನ್. ಭಾರತಿ ಅವರ ಜಾಗಕ್ಕೆ ಪ್ರಶಾಂತ.ವಿ.ರಾವ್ ಅವರನ್ನು ನಿಯೋಜಿಸಿರುವುದರಿಂದ ಎನ್.ಭಾರತಿಯವರನ್ನು ಜೋಯಿಡಾ ತಾ.ಪಂ ಕಾರ್ಯನಿರ್ವಹಣಾಧಿಕಾರಿಯಾಗಿ ನಿಯೋಜಿಸಿದ್ದಲ್ಲಿ ಜೋಯಿಡಾ ತಾಲೂಕು ಪಂಚಾಯತ್ ಮತ್ತು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಜಿಡ್ಡುಕಟ್ಟಿದ ಆಡಳಿತ ವ್ಯವಸ್ಥೆಯನ್ನು ಮಾರ್ಪಡಿಸಲು ಸುಲಭ ಸಾಧ್ಯವಾಗಲಿದೆ.
ಶಾಸಕರಾದ ಆರ್.ವಿ. ದೇಶಪಾಂಡೆ ತರುವ ಅನುದಾನಗಳ ಸಮರ್ಪಕ ಸದ್ಬಳಕೆ ಹಾಗೂ ಯೋಜನೆಗಳ ತ್ವರಿತ ಅನುಷ್ಟಾನಕ್ಕೆ ಮತ್ತು ಭ್ರಷ್ಟಾಚಾರದ ನಿಯಂತ್ರಣಕ್ಕೆ ಸೂಕ್ತ ವ್ಯಕ್ತಿಯಾಗಿರುವ ಎನ್.ಭಾರತಿಯವರನ್ನು ಜೋಯಿಡಾ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯನ್ನಾಗಿ ನಿಯೋಜಿಸಬೇಕೆಂಬುದೇ ತಾಲೂಕಿನ ಜನತೆಯ ಒತ್ತಾಸೆಯಾಗಿದೆ.