ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಕಾರಕುಂಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಂತೂ ಬಗೆಹರಿದಿದೆ. ಕಳೆದ ಕೆಲ ದಿವಸಗಳಿಂದ ವಿದ್ಯುತ್ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಕಾರಕುಂಡಿ ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡಿತ್ತು. ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಹರಿಸಿದರು.
ತಹಸೀಲ್ದಾರ ಅಶೋಕ ಭಟ್ಟ, ಜಿ.ಪಂ ಎಇಇ ಅಶೋಕ ಬಂಟ ಕಾರಕುಂಡಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಹೆಸ್ಕಾಂ ಅಧಿಕಾರಿಗಳನ್ನು ಕರೆಸಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರು. ಅದರಂತೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಗ್ರಾ.ಪಂ ವತಿಯಿಂದ ಕುಡಿಯುವ ನೀರಿನ ಪೂರೈಕೆಯನ್ನು ಪುನಃ ಆರಂಭಿಸಲಾಯಿತು.