ಶಿರಸಿ: ದೇಶದ ಸರ್ವತೋಮುಖ ಬೆಳವಣಿಗೆಯ ಜೊತೆಗೆ ಮಧ್ಯಮ ವರ್ಗ ಸೇರಿದಂತೆ ಕೃಷಿಕರನ್ನು ಒಳಗೊಂಡು ಎಲ್ಲರ ಹಿತವನ್ನು ಕಾಪಾಡುವ, ಉನ್ನತಿಯತ್ತ ಕೊಂಡೊಯ್ಯುವ ಮೂಲಕ ವಿಕಸಿತ ಭಾರತದ ಕಲ್ಪನೆಗೆ ನಾಂದಿಯಂತಿರುವ ಬಜೆಟ್ ಅನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಪ್ರಸ್ತುತ ಪಡಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು, ಕೃಷಿ ಹೊರತಾಗಿ ದೇಶದ ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಕೃಷಿಕರ ಏಳ್ಗೆಯನ್ನೇ ಗುರಿಯನ್ನಾಗಿಸಿಕೊಂಡಿರುವ ಮೋದಿ ನೇತೃತ್ವದ ಕೇಂದ್ರ ಸರಕಾರ ಮೊದಲ ಬಾರಿಗೆ ಕೃಷಿ ಸಮ್ಮಾನ್ ಯೋಜನೆ ಮೂಲಕ ಕೃಷಿಕರ ಕಲ್ಯಾಣಕ್ಕೆ ನಾಂದಿ ಹಾಡಿತ್ತು. ಪ್ರಸ್ತುತ ಕೃಷಿಕರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೃಷಿಯಲ್ಲಿ ಡಿಜಿಟಲೀಕರಣ, ಯಾಂತ್ರೀಕೃತ ಕೃಷಿ ಆಧಾರಿತ ವ್ಯವಸ್ಥೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿರುವುದು ಸ್ವಾಗತಾರ್ಹವಾಗಿದೆ. ಕೃಷಿಯಲ್ಲಿನ ಉತ್ಪಾದನೆ ಹೆಚ್ಚಿಸುವ ಮತ್ತು ವಾತಾವರಣ ಆಧಾರಿತ ಸುಧಾರಿತ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ತೊಡಸುವಿಕೆಯ ನಿಟ್ಟಿನಲ್ಲಿ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸೂರ್ಯಕಾಂತಿ, ಶೇಂಗಾ ಸೇರಿದಂತೆ ಎಣ್ಣೆಕಾಳುಗಳ ಬೆಳೆಯುವಿಕೆಯಲ್ಲಿ ಆತ್ಮನಿರ್ಭರಭಾರತ ಹೊಂದಲು ಯೋಜನೆ ರೂಪಿಸಲಾಗಿದೆ. ತೋಟಗಾರಿಕೆಯನ್ನು ಒಳಗೊಂಡು ಒಟ್ಟೂ 32 ಕ್ಷೇತ್ರದಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವ ಗುಣ ಹೊಂದಿರುವುದರ ಜೊತೆಗೆ ಹೆಚ್ಚು ಇಳುವರಿ ನೀಡುವ 109 ಕ್ಕೂ ಅಧಿಕ ಬೆಳೆಯ ಹೊಸ ತಳಿಯನ್ನು ಜೋಡಿಸಲಾಗಿದೆ. ಹಣ್ಣು ಮತ್ತು ತರಕಾರಿ ಬೆಳೆಯುವುದನ್ನು ಹೆಚ್ಚು ಪ್ರೋತ್ಸಾಹಿಸಲಾಗಿದೆ. ಸಾವಯುವ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 1 ಕೋಟಿ ಸಾವಯವ ರೈತರನ್ನು ಗುರುತಿಸುವುದರ ಜೊತೆಗೆ ಅವರಿಗೆ ಅವಶ್ಯಕವಿರುವ ಬ್ರ್ಯಾಂಡಿಗ್ ಮತ್ತು ಸರ್ಟಿಫಿಕೇಟನ್ನು ಎರಡು ವರ್ಷಗಳ ಅವಧಿಯಲ್ಲಿ ನೀಡಲು ನಿರ್ಧರಿಸಿದೆ. ಜೊತೆಗೆ ನಬಾರ್ಡ್ ಮೂಲಕ ಸಿಗಡಿ ಮೀನಿನ ಉತ್ಪಾದನೆ, ಪ್ರೊಸೆಸಿಂಗ್ ಮತ್ತು ರಪ್ತು ಮಾಡಲು ಅನುಕೂಲ ಮಾಡಲು ನಿರ್ಧರಿಸುವುದು ಸಂತಸದ ಸಂಗತಿಯಾಗಿದೆ.
ಮಹಿಳಾ ಸಬಲೀಕರಣ, ರಕ್ಷಣೆ ಸೇರಿದಂತೆ ನಾರಿಶಕ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮೂರು ಲಕ್ಷ ಕೋಟಿಗೂ ಅಧಿಕಹಣ ಮೀಸಲಿಟ್ಟಿರುವುದು ಸ್ವಾಗತಾರ್ಹ. ಜೊತೆಗೆ ದೇಶವನ್ನು ಬಲಪಡಿಸುವ ನಿಟ್ಟಿನಲ್ಲಿ ರಕ್ಷಣಾ ವ್ಯವಸ್ಥೆಗೆ ಬಜೆಟ್ ನಲ್ಲಿ ಅತಿಹೆಚ್ಚು ಹಣ ನೀಡಲಾಗಿದೆ. ಒಟ್ಟಾರೆಯಾಗಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಹಾದಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೆಂದ್ರ ಸರಕಾರ ಮಾಡುತ್ತಿದೆ. ಅದಕ್ಕೆ ಪೂರಕವಾದ ಬಜೆಟ್ ಇದಾಗಿದ್ದು, ಎಲ್ಲ ದೇಶವಾಸಿಗಳ ಒಳಿತನ್ನು ಕಾಪಾಡುವ ಅಂಶಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.