ಸಂದೇಶ್ ಎಸ್.ಜೈನ್
ದಾಂಡೇಲಿ: ತಕ್ಷಣಕ್ಕೆ ಅವರವರ ಉಳಿತಾಯ ಖಾತೆಯಿಂದ ಹಣವನ್ನು ತೆಗೆಯಲು ಬಹಳ ಅವಶ್ಯಕವಾಗಿರುವ ಕೇಂದ್ರವೆ ಎಟಿಎಂ ಕೇಂದ್ರ. ಎಟಿಎಂ ಕೇಂದ್ರಗಳು ಹವಾನಿಯಂತ್ರಿತ ವ್ಯವಸ್ಥೆಯನ್ನು ಒಳಗೊಂಡು ಬಹಳ ಸ್ವಚ್ಛತೆಯಿಂದ ಇರುತ್ತದೆ ಮತ್ತು ಇರಬೇಕು ಕೂಡ.
ಆದರೆ ದಾಂಡೇಲಿಯ ಜೆ.ಎನ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರ ಮಾತ್ರ ದನದ ದೊಡ್ಡಿಯಾಗಿದೆ. ಎಟಿಎಂ ಕೇಂದ್ರಕ್ಕೆ ಭದ್ರತಾ ಸಿಬ್ಬಂದಿಯಿಲ್ಲದೆ ಇದ್ದರೆ ದನದ ದೊಡ್ಡಿಯಾಗುತ್ತದೆ ಎನ್ನುವುದಕ್ಕೆ ಈ ಎಟಿಎಂ ಕೇಂದ್ರವೇ ಉದಾಹರಣೆ.
ಸದಾ ಬಾಗಿಲು ತೆರೆದುಕೊಂಡಿರುವ ಈ ಎಟಿಎಂ ಕೇಂದ್ರಕ್ಕೆ ಯಾವುದೇ ಭಯವಿಲ್ಲದೆ ಬಿಡಾಡಿ ದನಗಳು ನುಗ್ಗುತ್ತವೆ. ಹಾಗಾಗಿ ಇಲ್ಲಿ ಎಟಿಎಂ ಕೇಂದ್ರದೊಳಗೆ ಅಲ್ಲಲ್ಲಿ ಸಗಣಿಯ ಮುದ್ದೆ ಕಾಣುತ್ತದೆ.
ಹಣ ತೆಗೆಯಲು ಎಚ್ಚರಿಕೆಯಿಂದ ಈ ಎಟಿಎಂ ಕೇಂದ್ರಕ್ಕೆ ಹೋಗಬೇಕಾಗಿದೆ. ಬಹಳ ಆಶ್ಚರ್ಯ ಅಂದರೆ ಕೆನರಾ ಬ್ಯಾಂಕ್ ಇರುವ ಕಟ್ಟಡದಲ್ಲೆ ಈ ಎಟಿಎಂ ಕೇಂದ್ರವಿದ್ದು, ಬ್ಯಾಂಕಿನ ಅಧಿಕಾರಿಗಳೇಕೆ ಸುಮ್ಮನಿದ್ದಾರೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.