ಯಲ್ಲಾಪುರ: ತಾಲೂಕಿನಲ್ಲಿ ಸತತವಾಗಿ ಗಾಳಿ ಮಳೆ ಅಬ್ಬರಿಸುತ್ತಿದ್ದು, ರವಿವಾರ ರಾತ್ರಿ ಬೀಸಿದ ಗಾಳಿಗೆ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಚಿಮನಳ್ಳಿ ಭಾಗದ ಹಲವೆಡೆ ಅಡಿಕೆ ತೋಟದಲ್ಲಿ ಅಡಿಕೆ ಮರಗಳು ಮುರಿದು ಬಿದ್ದು ಹಾನಿ ಉಂಟಾಗಿದೆ.
ಬೇಸಿಗೆಯಲ್ಲಿ ಬರಗಾಲ ನೀರಿನ ಕೊರತೆಯಿಂದ ಅಡಿಕೆ ಸಿಂಗಾರ ಒಣಗಿ ನಷ್ಟ ಉಂಟಾಗಿತ್ತು. ಮಳೆಗಾಲದ ಆರಂಭದಲ್ಲಿ ಅಡಿಕೆ ಮುಗುಡು,ಮಿಳ್ಳೆ ಉದುರಿ ಹೋಗಿವೆ. ಈಗ ಗಾಳಿ ಮಳೆಗೆ ಮರ ಮುರಿದು,ಮರಕ್ಕೆ ಮರ ಜಜ್ಜಿ ಅಡಿಕೆ ಉದುರಿ ನಷ್ಟವಾಗುತ್ತಿದ್ದು, ಬೆಳೆಗಾರರ ಚಿಂತೆಗೆ ಕಾರಣವಾಗಿದೆ.
ಈಗಾಗಲೇ ತೋಟಕ್ಕೆ ಔಷಧಿ ಸಿಂಪಡಿಸಿದರೂ, ಬಿಡುವಿಲ್ಲದೇ ಸತತ ಮಳೆಯು ಸುರಿಯುತ್ತಿರುವ ಕಾರಣ ಅಡಿಕೆ ತೋಟದಲ್ಲಿ ಕೊಳೆರೋಗ ಕಾಣಿಸಿಕೊಳ್ಳುವ ಭೀತಿ ಉಂಟಾಗಿದೆ. ಇವೆಲ್ಲವುಗಳಿಂದ ಬರುವ ಫಸಲೂ ಕಡಿಮೆಯಾಗಲಿದ್ದು ತೋಟಿಗರ ಚಿಂತೆಗೆ ಕಾರಣವಾಗಿದೆ.