ಕರಾವಳಿಯಲ್ಲಿ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆ | ಕಾಳಜಿ ಕೇಂದ್ರದತ್ತ ನಿರಾಶ್ರಿತರು
ಹೊನ್ನಾವರ : ಮೇಘಸ್ಫೋಟಕ್ಕೆ ಜಿಲ್ಲೆ ತತ್ತರವಾಗಿದ್ದು, ಇದರ ಬೆನ್ನಲ್ಲೆ ನಿರಂತರ ಗುಡ್ಡ ಕುಸಿತದಿಂದ ಜನರ ಸಾವು ನೋವು ಸಂಭವಿಸುವಂತಾಗಿದೆ.
ತಾಲೂಕಿನ ಕೆಳಗಿನೂರು ಗ್ರಾಮ ಪಂಚಾಯತ ವ್ಯಾಪ್ತಿಯ ಪ್ರಸಿದ್ದ ಪ್ರವಾಸಿ ತಾಣವಾಗಿರುವ ಅಪ್ಸರಕೊಂಡ ಪ್ರದೇಶದಲ್ಲಿ ಸ್ಥಳೀಯರಿಗೆ ಗುಡ್ಡ ಕುಸಿತದ ಭೀತಿ ಉಂಟಾಗಿದ್ದು, ಶುಕ್ರವಾರ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಪ್ಸರಕೊಂಡ ಮಠಕ್ಕೆ ಹೋಗುವ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಕಳೆದ ಮೂರು ವರ್ಷದಿಂದ ಮಳೆಗಾಲದಲ್ಲಿ ಗುಡ್ಡ ಕುಸಿತದ ಆತಂಕ ಉಂಟಾಗಿ, ಗುಡ್ಡದ ಅಂಚಿನ ನಿವಾಸಿಗಳು ವಾಸ್ತವ್ಯದ ಮನೆ ಬಿಟ್ಟು ಉಳಿಯುವಂತಾಗಿತ್ತು. ಈ ವರ್ಷದ ಮಳೆಯ ಪ್ರಾರಂಭದಲ್ಲಿಯೇ ಗುಡ್ಡ ಕುಸಿತದ ಆತಂಕ ಸ್ಥಳೀಯ ನಿವಾಸಿಗಳಿಗೆ ಕಾಡಲು ಪ್ರಾರಂಭವಾಗಿದೆ. ಹೆಚ್ಚಿನದಾಗಿ ಕೃಷಿ, ಬೇಸಾಯ, ಕೂಲಿ ಕೆಲಸ ಮಾಡಿಕೊಂಡಿರುವ ಜನರಿಗೆ ಪ್ರತಿ ಮಳೆಗಾಲದಲ್ಲಿ ಗುಡ್ಡ ಕುಸಿತದ ಭೀತಿಯಿಂದ ಮಳೆಗಾಲದ ದಿನಚರಿಗೆ ಅಡ್ಡಿ ಉಂಟಾಗುತ್ತಿದೆ.
ಗುಡ್ಡ ಕುಸಿತದ ಆತಂಕದ ಮುಂಜಾಗೃತಾ ಕ್ರಮವಾಗಿ ಸ್ಥಳೀಯ ಗ್ರಾಮ ಪಂಚಾಯತದಿಂದ ಗುಡ್ಡದ ತಟದ ನಿವಾಸಿಗಳಿಗೆ ಮಳೆಗಾಲ ಮುಗಿಯುವ ತನಕ ಕಾಳಜಿ ಕೇಂದ್ರಕ್ಕೆ ಅಥವಾ ಬೇರೆಡೆ ವಾಸ್ತವ್ಯ ಮಾಡುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಇತ್ತೀಚಿಗೆ ಪ್ರತಿ ವರ್ಷ ಇದೆ ಪರಿಸ್ಥಿತಿ ಉಂಟಾಗಿ, ಮಳೆಗಾಲದ ಹೆಚ್ಚಿನ ದಿನ ಕಾಳಜಿ ಕೇಂದ್ರದಲ್ಲೇ ಕಳೆಯುವಂತಾಗಿತ್ತು. ಕಾಳಜಿ ಕೇಂದ್ರದಲ್ಲಿ ಕಳೆದಿದ್ದು ಬಿಟ್ಟರೆ, ದೊಡ್ಡ ಮಟ್ಟದಲ್ಲಿ ಗುಡ್ಡ ಕುಸಿತವು ಆಗಿರಲಿಲ್ಲ.
ಗುಡ್ಡ ಕುಸಿತದ ಪ್ರದೇಶಕ್ಕೆ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಆಡಳಿತಧಿಕಾರಿಗಳಾದ ವಿನೋದ ಅನ್ವೇಕರ್ ಭೇಟಿ ನೀಡಿ ಪರಿಶೀಲನೆ ಮಾಡಿದರು, ಈ ಸಂದರ್ಭದಲ್ಲಿ ತಾ. ಪಂ.ಕಾರ್ಯನಿರ್ವಾಹಕ ಅಧಿಕಾರಿ, ನೋಡೆಲ ಅಧಿಕಾರಿ ಗಳಾದ ಎಂ. ಎಸ್. ನಾಯ್ಕ್, ತಾಲೂಕು ಪಂಚಾಯತ ಸಹಾಯಕ ನಿರ್ದೇಶಕರು, ಗ್ರಾ. ಪಂ. ಸದಸ್ಯ ಅಣ್ಣಪ್ಪ ಗೌಡ, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
ಕಳೆದ ಮೂರು ವರ್ಷದಿಂದ ಗುಡ್ಡ ಕುಸಿತದ ಆತಂಕ ನಿರ್ಮಾಣ:
ಅಪ್ಸರಕೊಂಡದಲ್ಲಿ 2 ಎಕರೆಯ ವಿಸ್ತೀರ್ಣದಷ್ಟು ಕೆಂಪು ಕಲ್ಲಿನ ಬಂಡೆಯನ್ನೊಳಗೊಂಡ ಗುಡ್ಡಕ್ಕೆ ಹೊಂದಿಕೊಂಡು 105 ಕುಟುಂಬಗಳಿದ್ದು, ಸರಿಸುಮಾರು 250 ಕ್ಕಿಂತ ಹೆಚ್ಚು ಜನರು ವಾಸವಾಗಿದ್ದಾರೆ. ಮೂರು ವರ್ಷದ ಹಿಂದಿನ ಮಳೆಗಾಲದಲ್ಲಿ ಒಂದು ಬಂಡೆ ಧರೆಗುರುಳಿತ್ತು. ಮತ್ತಷ್ಟು ಗುಡ್ಡ ಕುಸಿತದ ಭೀತಿ ಉಂಟಾಗಿತ್ತು. ಅತ್ಯಂತ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇತ್ತೀಚಿನ ಮಳೆಗಾಲದಲ್ಲಿ ಸ್ಥಳೀಯ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.
ಭಟ್ಟರ ಅಂಗಡಿ ಕ್ರಾಸ್ ನಿಂದ ಅಪ್ಸರಕೊಂಡ ಶಾಲೆಯ ವರೆಗೆ 750 ಮೀಟರ್ ಗುಡ್ಡ ಕುಸಿತದ ಭೀತಿಯಿದೆ. ಅದರ ಮುಂದೂಕೂಡ ಅಂದಾಜು 250 ಮೀಟರ್ ಗುಡ್ಡ ಅದೇ ಸ್ಥಿತಿಯಲ್ಲಿದ್ದು ಹತ್ತಿರ ಯಾವುದೇ ವಾಸ್ತವ್ಯ ಇರುವುದಿಲ್ಲ. ಗುಡ್ಡದ ಮದ್ಯೆ ದೊಡ್ಡ ದೊಡ್ಡ 100 ಕ್ಕಿಂತ ಬಂಡೆಗಳಿದ್ದು, ಗುಡ್ಡ ಗಿಡ ಗಂಟಿಗಳಿಂದ ತುಂಬಿದೆ. ಅದರ ಮಧ್ಯೆ ಮತ್ತಷ್ಟು ಬಂಡೆಗಳಿರುವ ಸಾಧ್ಯತೆಯಿದೆ. ಅಂಗನವಾಡಿ, ಸರಕಾರಿ ಶಾಲೆ ಮತ್ತು ಸ್ಥಳೀಯ ನಿವಾಸಿಗಳಿಗೆ ಮಳೆಗಾಲ ಬಂತು ಅಂದರೆ ಜೀವ ಕೈಯಲ್ಲಿ ಹಿಡಿದು ದಿನ ಕಳೆಯಬೇಕಿದೆ. ಈ ಪ್ರದೇಶದಲ್ಲಿ ಶಾಶ್ವತ ಪರಿಹಾರ ಕೈಗೊಳ್ಳುವ ತನಕ ಅಪಾಯದ ಭೀತಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
ಕೇಂದ್ರೀಯ ತಂಡ ಭೇಟಿ :
ಈ ಪ್ರದೇಶಕ್ಕೆ ಕೇಂದ್ರೀಯ ತಂಡ ಭೇಟಿ ನೀಡಿ ಅಪ್ಸರಕೊಂಡ ಭಾಗದ ಗುಡ್ಡ ಕುಸಿತ ದ ಕುರಿತು ಪರಿಶೀಲನೆ ಮಾಡಿ, ಈ ಗುಡ್ಡ ದಲ್ಲಿ ಇರುವ ಕಲ್ಲು ಬಂಡೆಬೀಳುವ ಸಾಧ್ಯತೆ ಇರುವುದರಿಂದ ರಸ್ತೆ ಬಂದು ಮಾಡಿ ಬದಲಿ ವ್ಯವಸ್ಥೆ ಮಾಡಲು ತಾಲೂಕು ಆಡಳಿತಕ್ಕೆ ತಿಳಿಸಿದ್ದರು. ಇನ್ನೂ ಗುಡ್ಡ ಕುಸಿತದ ಶಾಶ್ವತ ಪರಿಹಾರಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂದು ಪರಿಶೀಲನೆ ನಡೆಸುವುದಾಗಿ ಹೇಳಿ ತೆರಳಿದ್ದರು. ಗುಡ್ಡ ಕುಸಿತ ತಡೆಯಲು ಹಂತ ಹಂತವಾಗಿ ಮೂರು ಅಥವಾ ನಾಲ್ಕು ಕಬ್ಬಿಣದ ಜಾಳಗಿ ಮಾದರಿಯಲ್ಲಿ ಸ್ಟೆಪ್ (ಬೇಲಿ) ನಿರ್ಮಿಸುವುದಾಗಿ, ಗುಡ್ಡ ಕುಸಿತವಾದರೆ ಬಂಡೆ ಕೆಳಗೆ ಹೋಗದಂತೆ ಈ ಬೇಲಿ ತಡೆಯತ್ತದೆ ಎಂದು ಹೇಳಲಾಗಿತ್ತು. ಅದು ಇಲ್ಲಿಯ ತನಕ ಕಾರ್ಯರೂಪಕ್ಕೆ ಬಂದಿಲ್ಲ. ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿತ್ತು.
ಸಚಿವರು, ಶಾಸಕರು, ಅಧಿಕಾರಿಗಳ ಭರವಸೆ:
ಅಪ್ಸರಕೊಂಡ ಗುಡ್ಡ ಕುಸಿತ ಸ್ಥಳಕ್ಕೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಶಾಸಕ ಸುನೀಲ ನಾಯ್ಕ ಜೊತೆಗೂಡಿ ಭೇಟಿ ನೀಡಿ ಸರಿಪಡಿಸುವ ಭರವಸೆ ನೀಡಿದ್ದರು. ಮಳೆಗಾಲದ ಸಂದರ್ಭದಲ್ಲಿ ಗುಡ್ಡವನ್ನು ತೆರುವುಗೊಳಿಸುವುದು ಇನ್ನೊಂದು ಅಪಾಯಕ್ಕೆ ದಾರಿಮಾಡಿಕೊಟ್ಟಂತೆ ಎಂಬ ಭಯವೂ ಇದ್ದು, ಈಗ ಕಣ್ಣಳತೆಯಲ್ಲಿ ಕಾಮಗಾರಿ ನಡೆಸುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇರುವುದರಿಂದ ಗುಡ್ಡ ತೆರುವಿನಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದು ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿ, ಮಳೆಗಾಲ ನಂತರ ಸರಿಪಡಿಸಿ ಕೊಡುವುದಾಗಿ ಸ್ಥಳೀಯ ನಿವಾಸಿಗಳಿಗೆ ಭರವಸೆ ನೀಡಿದ್ದರು.
ಲೋಕೋಪಯೋಗಿ ಇಲಾಖೆ ನೀಲನಕ್ಷೆ ಸಿದ್ಧಪಡಿಸಿತ್ತು :
ಗುಡ್ಡ ಕುಸಿತದ ತಾತ್ಕಾಲಿಕ ಪರಿಹಾರಕ್ಕೆ ಲೋಕೋಪಯೋಗಿ ಇಲಾಖೆ ನೀಲನಕ್ಷೆ ಸಿದ್ದ ಪಡಿಸಿರುವ ಬಗ್ಗೆ ಅಧಿಕಾರಿ ವಲಯದಿಂದ ಮಾಹಿತಿ ಕೇಳಿ ಬಂದಿತ್ತು. ನೀಲನಕ್ಷೆ ಏನೋ ಸಿದ್ದವಾಗಿದೆ, ಅದಕ್ಕೆ ಹಣ ಮಂಜೂರಿ ಆಗಿಲ್ಲ. ಬಂಡೆ ಮತ್ತು ಮಣ್ಣು ಕುಸಿದು ಕೆಳಗೆ ಬರದಂತೆ ತಡೆ ಗೋಡೆ ಮಾದರಿಯಲ್ಲಿ ಮಾಡಲು ಯೋಜನೆ ರೂಪಿಸಿದ್ದರು ಕೂಡ ಹಣ ಮಂಜೂರಿ ಆಗಿರಲಿಲ್ಲ.
ಸಚಿವ ಮಂಕಾಳು ವೈದ್ಯರ ಮೇಲೆ ಭರವಸೆ :
ಕಳೆದ ವರ್ಷದ ಮಳೆಗಾಲದ ಸಮಯದಲ್ಲಿ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯರು ಗುಡ್ಡ ಕುಸಿತ ಸಮಸ್ಯೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಕೇಳಿ ಬಂದಿತ್ತು. ಈ ವರ್ಷವು ಮತ್ತೆ ಗುಡ್ಡ ಕುಸಿತದ ಭೀತಿ ಉಂಟಾಗಿದೆ ಸಚಿವರ ಮಂಕಾಳ್ ವೈದ್ಯರು ಮುತುವರ್ಜಿ ವಹಿಸಿ ಅಪ್ಸರಕೊಂಡ ವ್ಯಾಪ್ತಿಯ ಗುಡ್ಡದ ಅಂಚಿನ ನಿವಾಸಿಗಳಿಗೆ ಸರಕಾರದಿಂದ ಶಾಶ್ವತ ಪರಿಹಾರ ಒದಗಿಸಿಕೊಡಲಿ ಎನ್ನುವ ಆಶಾಭಾವನೆ ಸ್ಥಳೀಯ ನಿವಾಸಿಗಳು ಇಟ್ಟುಕೊಂಡಿದ್ದಾರೆ.