ಸಿದ್ದಾಪುರ: ನಮ್ಮ ತೋಟಕ್ಕೆ ಅಗತ್ಯ ಇರುವ ಪೋಷಕಾಂಶವನ್ನು ತಜ್ಞರ ಸಲಹೆ ಪಡೆದು ನೀಡಿದರೆ ಯಾವುದೇ ರೋಗ ಹರಡುವುದಿಲ್ಲ. ರೈತರು ತಮ್ಮ ಉತ್ಪನ್ನಗಳಿಗಿಂತ ಹೆಚ್ಚು ವೆಚ್ಚ ಮಾಡುತ್ತಿರುವುದರಿಂದ ಆರ್ಥಿಕ ತೊಂದರೆ ಅನುಭವಿಸುವಂತಾಗಿದೆ ಎಂದು ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘ ಹಾರ್ಸಿಕಟ್ಟಾ ಹಾಗೂ ತೋಟಗಾರಿಕಾ ಇಲಾಖೆ ಇವುಗಳ ಆಶ್ರಯದಲ್ಲಿ ತೋಟದ ಬೆಳೆಗಳಲ್ಲಿ ರೋಗ ಮತ್ತು ಕೀಟ ನಿಯಂತ್ರಣದ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಹಕಾರ ಸಂಘಗಳು ಈ ರೀತಿಯ ಕಾರ್ಯಗಾರವನ್ನು ನಡೆಸಿ ಮಾಹಿತಿ ನೀಡುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ತಾಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅರುಣ ಎಚ್. ಅವರು ಅಡಕೆ ತೋಟಕ್ಕೆ ಹರಡುವ ರೋಗ, ಕೀಟ ಬಾಧೆಗಳ ಕುರಿತು ಮಾಹಿತಿ ನೀಡಿ ಅವುಗಳ ನಿರ್ಮೂಲನೆ ಹೇಗೆ ಮಾಡಬೇಕು ಎನ್ನುವ ಕುರಿತು ಹಾಗೂ ತೋಗಾರಿಕಾ ಅಧಿಕಾರಿ ಕಾಶೀನಾಥ ಪಾಟೀಲ್ ತೋಟಗಾರಿಕಾ ಇಲಾಖೆಯಲ್ಲಿ ಇರುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷೆ ಹನುಮಕ್ಕ ಭೋವಿ ಕಾರ್ಯಕ್ರಮ ಉದ್ಘಾಟಿಸಿದರು. ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹಾಬಲೇಶ್ವರ ಭಟ್ಟ ಅಗ್ಗೇರೆ ಅಧ್ಯಕ್ಷತೆವಹಿಸಿದ್ದರು. ಗ್ರಾಪಂ ಸದಸ್ಯ ಶಾಂತಕುಮಾರ್ ಪಾಟೀಲ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬೆಳೆ ಸಮೀಕ್ಷೆ-2024 ಮತ್ತು ಅಡಕೆ ಹಾಗೂ ಕಾಳುಮೆಣಸು ವಿಮೆ ನೋಂದಣಿ ಮಾಹಿತಿ,ಪ್ಲಾಸ್ಟಿಕ್ ಮುಕ್ತ ಪರಿಸರ ಜೊತೆ ಕೃಷಿ ಈ ಕುರಿತು ಸಂಘದ ಕೃಷಿ ಪರಿಸರ ಜಾಗೃತ ಮನವಿ ಬಿಡುಗಡೆ ಮಾಡಲಾಯಿತು.
ಸಂಘದ ನಿರ್ದೇಶಕ ಅನಂತ ಹೆಗಡೆ ಹೊಸಗದ್ದೆ, ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ ಕಾರ್ಯಕ್ರಮ ನಿರ್ವಹಿಸಿದರು.